ಕಾರವಾರ: ಉದ್ದನೆಯ ಕೂದಲು, ಕೊಳಕಾದ ಬಟ್ಟೆ, ಅನಾಥವಾಗಿ ಅರೆನಗ್ನಾವಸ್ಥೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನ ರೂಪವೇ ಇಂದು ಬದಲಾಗಿದೆ.
ಹೌದು, ಮಾನಸಿಕ ಅಸ್ವಸ್ಥನನ್ನು ಕಂಡು ಮರುಗಿದ್ದ ಭಟ್ಕಳ ಆಟೋ ರಿಕ್ಷಾ ಚಾಲಕರು ಹಾಗೂ ಸಮಾಜ ಸೇವಕ ಮಂಜು ನಾಯ್ಕ ಮುಟ್ಠಳ್ಳಿ ಅವರು ಮಾನಸಿಕ ಅಸ್ವಸ್ಥನ ತಲೆಕೂದಲು ತೆಗೆದು, ಸ್ನಾನ ಮಾಡಿಸಿ ಸ್ವಚ್ಛಗೊಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭಟ್ಕಳದ ರೈಲು ನಿಲ್ದಾಣದ ಬಳಿ ಕಳೆದೊಂದು ತಿಂಗಳಿನಿಂದ ಕೊಳಕು ಬಟ್ಟೆಯಲ್ಲಿ ಓಡಾಡುತ್ತ, ಸರಿಯಾಗಿ ಊಟ ತಿಂಡಿ ಇಲ್ಲದೇ ಮರಗಿಡಗಳ ಕೆಳಗೆ ಮಲಗುತ್ತಿದ್ದ ವ್ಯಕ್ತಿವೋರ್ವನನ್ನು ಕಂಡು ಇವರು ಮರುಕ ವ್ಯಕ್ತಪಡಿಸಿದ್ದರು. ಅಲ್ಲದೆ ಈತನಿಗೆ ಹೊಸ ರೂಪ ಕೊಡುವ ಉದ್ದೇಶದೊಂದಿಗೆ ಎಲ್ಲರೂ ಸೇರಿ ಆತನ ಗಡ್ಡ, ತಲೆಕೂದಲು ತೆಗೆದು, ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ, ಊಟ ತಿಂಡಿ ನೀಡಿದ್ದಾರೆ.
ಬಳಿಕ ತಾನು ಪುಣೆಯಿಂದ ಬಂದಿರುವುದಾಗಿ ತಿಳಿಸಿರುವ ಈತ ತನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾನೆ. ನಂತರ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದಾನೆ. ಇನ್ನು ಈ ವೇಳೆ ಆಟೋ ರಿಕ್ಷಾ ಚಾಲಕರಾದ ಗಣಪತಿ ನಾಯ್ಕ, ಹನುಮಂತ ನಾಯ್ಕ, ಶೇಷಗಿರಿ ನಾಯ್ಕ, ನಾಗೇಶ ನಾಯ್ಕ, ಮಾದೇವ ನಾಯ್ಕ, ಶೇಖರ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.