ಭಟ್ಕಳ: ಭಟ್ಕಳದ ಪುರಸಭೆ ನೂತನ ಅಧ್ಯಕ್ಷ ಸ್ಥಾನಕ್ಕೆ ಮಹ್ಮದ್ ಪರ್ವೇಜ್ ಕಾಶೀಮಜಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೈಶೇರ್ ಮೊಹತೇಶಾಮ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ರವಿಚಂದ್ರ ಎಸ್. ಘೋಷಣೆ ಮಾಡಿದರು.
ಕಳೆದ ಒಂದೂವರೆ ವರ್ಷದ ಹಿಂದೆ ಪುರಸಭೆ ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯದೇ ಪುರಸಭೆಯ ಆಡಳಿತ ರಚನೆಯಾಗದೇ ಸಹಾಯಕ ಆಯುಕ್ತರ ಆಡಳಿತದಲ್ಲಿ ನಡೆಯುತ್ತಿತ್ತು.
ಅಧ್ಯಕ್ಷರಾಗಿ ಆಯ್ಕೆಯಾದ ಮಹ್ಮದ್ ಪರ್ವೇಜ್ ಕಾಶಿಮಜಿ ಅವರು ಅತ್ಯಂತ ಹಿರಿಯ ಸದಸ್ಯರು ಹಾಗೂ ಈ ಹಿಂದೆ 2 ಬಾರಿ (2002-2004 ಮತ್ತು 2008-2010) ರ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಒಂದು ಬಾರಿ 1998- 2001ರ ಅವಧಿಯಲ್ಲಿ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಈ ಬಾರಿ ಮೂರನೇ ಸಲ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆಯಾದ ಕೈಸರ್ ಮೊಹತೇಶಾಮ್ ಅವರು ಈ ಹಿಂದಿನ ಅವಧಿಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಈ ಬಾರಿ ಉಪಾಧ್ಯಕ್ಷ ಸ್ಥಾನ ಲಭಿಸಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಿಸಿದ ಚುನಾವಣಾಧಿಕಾರಿ ರವಿಚಂದ್ರ ಎಸ್. ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹೂವಿನ ಹಾರ ಹಾಕಿ ಅಭಿನಂದಿಸಿ, ಅಧಿಕಾರ ವಹಿಸಿಕೊಟ್ಟರು.