ಕಾರವಾರ: ಭಟ್ಕಳದಲ್ಲಿ ಕಳೆದ ಎರಡು ದಿನಗಳಿಂದ ಜರುಗಿದ ಪ್ರಸಿದ್ಧ ಮಾರಿಜಾತ್ರೆ ಗುರುವಾರ ಸಂಜೆ ಮಾರಿ ಮೂರ್ತಿ ನಿಮಜ್ಜನ ಮೂಲಕ ಸಂಪನ್ನಗೊಂಡಿತು.
ಬುಧವಾರ ಬೆಳಗ್ಗೆ ಆರಂಭಗೊಂಡಿದ್ದ ಮಾರಿ ಜಾತ್ರೆಗೆ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಭಕ್ತಸಾಗರವೇ ಹರಿದು ಬಂದಿತ್ತು. ವಿವಿಧ ಪೂಜಾ ಕೈಂಕರ್ಯಗಳು ನಡೆದು ಭಕ್ತರು ದೇವಿಯ ದರ್ಶನ ಪಡೆದರು.
ಸಂಜೆ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಜಾಲಿಕೋಡಿಯ ಸಮುದ್ರ ತೀರಕ್ಕೆ ಒಯ್ಯಲಾಯಿತು. ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ನಿಮಜ್ಜನ ಮಾಡಲಾಯಿತು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಜಿಲ್ಲಾ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.