ಕಾರವಾರ: ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್ ಒಂದನ್ನು ಗೋಕರ್ಣದಲ್ಲಿ ವಶಕ್ಕೆ ಪಡೆದಿರುವ ಪೊಲೀಸರು ಬಂಧಿತರಿಂದ ಕಾರದಪುಡಿ ಸಹಿತ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಮೂಲದ ಓಂ ಪ್ರಕಾಶ, ಪ್ರಕಾಶ ಹುಲಗಪ್ಪನವರ್, ರಾಕೇಶ ಭಜಂತ್ರಿ ಬಂಧಿತರ ಆರೋಪಿಗಳು. ಇನ್ನಿಬ್ಬರು ದಾಳಿ ವೇಳೆ ಪರಾರಿಯಾಗಿದ್ದಾರೆ. ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುವ ಲಾರಿ ಸೇರಿದಂತೆ ಇನ್ನಿತರ ವಾಹನಗಳನ್ನು ತಡೆದು ದರೋಡೆಗೆ ಯತ್ನಿಸುತ್ತಿದ್ದಾಗ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಸಿಕ್ಕಿಬಿದ್ದಿದ್ದಾರೆ.
ಕೃತ್ಯಕ್ಕೆ ಬಳಸುತ್ತಿದ್ದ ಹರಿತವಾದ ಲಾಂಗ್‌ಗಳು, ಕಬ್ಬಿಣದ ರಾಡ್, ಚೂಪಾದ ರಾಡ್, ಮಂಕಿ ಕ್ಯಾಪ್, ಕಟ್ಟಿಂಗೆ ಪ್ಲೇಯರ್, ಸ್ಕ್ರೂ ಡ್ರೈವರ್ , ಸುಮಾರು 200 ಗ್ರಾಂ ಆಗುವಷ್ಟು ಖಾರದ ಪುಡಿ ಜಪ್ತು ಮಾಡಲಾಗಿದೆ. ದರೋಡೆಕೋರರು ಈ ಹಿಂದೆ ಯಲ್ಲಾಪುರ, ಅಂಕೋಲಾ, ಉಡುಪಿ, ಹುಬ್ಬಳ್ಳಿ, ಕೊಪ್ಪಳ, ಗದಗ, ವಿಜಯಪುರ ಗಳಲ್ಲಿ ಹೆದ್ದಾರಿ ದರೊಡೆ, ಮನೆಗಳ್ಳತನ, ವಾಹನಕಳ್ಳತನ, ಸುಲಿಗೆ ಡಕಾಯತಿಗೆ ಸಂಬಂದಿಸಿದ 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ ಎನ್ನಲಾಗಿದೆ.