ಶಿರಸಿ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರದ್ದೇ ಪಾರುಪತ್ಯ. ಮಲೆನಾಡು ಅಡಿಕೆ ಬೆಳೆಗೆ ಹೆಸರಾಗಿದ್ದು, ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಅಡಿಕೆ ಬೆಳೆಗಾರರಿಗೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಈ ಬಾರಿ ಲಾಕ್ಡೌನ್ ಬಿಸಿ ನಡುವೆಯೇ ಅಡಿಕೆಗೆ ಮಿಳ್ಳೆ ಉದುರುವ ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕಳೆದ ಬಾರಿ ಬೆಲೆ ಜಾಸ್ತಿ ಇದ್ದರೂ ಕೂಡ ಬೆಳೆ ಕಡಿಮೆಯಾಗಿ ಅಡಿಕೆ ಬೆಳೆಗಾರರು ಸಂಕಷ್ಟ ಸಿಲುಕಿದ್ದರು. ಆದರೆ ಈ ವರ್ಷದ ಮೊದಲ ಭಾಗದಲ್ಲೇ ಅಡಿಕೆಯ ಸಣ್ಣ ಕಾಯಿಗಳು ಉದುರಲಾರಂಭಿಸಿದ್ದು ಮುಂದಿನ ವರ್ಷಕ್ಕೆ ಬೆಳೆ ಕಡಿಮೆಯಾಗುವ ಲಕ್ಷಣ ಈಗಲೇ ಗೋಚರವಾಗಿದೆ. ಹವಾಮಾನದಲ್ಲಿನ ಏರುಪೇರು ಹಾಗೂ ಕಾಡು ಪ್ರಾಣಿಗಳ ಕಾಟ ಇದಕ್ಕೆ ಮುಖ್ಯ ಕಾರಣವಾಗಿದೆ.
ಮಲೆನಾಡು ಭಾಗಗಳ ಅರಣ್ಯಗಳಲ್ಲಿ ಆಹಾರ ಸಿಗದೆ ಕಾಡು ಪ್ರಾಣಿಗಳು ರೈತರ ಅಡಿಕೆ ತೋಟಗಳತ್ತ ಮುಖಮಾಡಿವೆ. ಅಡಿಕೆಯ ಹಸಿ ಸಿಂಗಾರವನ್ನ ತಿಂದು ಅಡಿಕೆ ಬೆಳೆಯಲು ಅವಕಾಶ ಮಾಡಿಕೊಡುತ್ತಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಹವಾಮಾನ ಕೂಡ ರೈತರಿಗೆ ಕೈ ಕೊಡುತ್ತಿದೆ. ಬಿಸಿಲಿನ ಮಧ್ಯೆ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಅಡಿಕೆಯ ಹಸಿ ಮಿಳ್ಳೆಗಳು ಉದುರುತ್ತಿವೆ. ಸರಿಯಾದ ಪರಾಗಸ್ಪರ್ಶ ಆಗದೇ ಇರುವ ಕಾರಣ ಅಡಿಕೆ ಕಾಯಿಗಳು ನಿಲ್ಲುತ್ತಿಲ್ಲ. ಅಡಿಕೆ ಹಸಿ ಕಾಯಿ ಉದುರುತ್ತಿದೆ ಅಂತ ಯಾವುದೇ ಕೀಟನಾಶಕಗಳನ್ನ ಸಿಂಪಡಿಸಿದಾಗ ಅದೂ ಕೂಡ ಪರಾಗಸ್ಪರ್ಶದ ಮೇಲೆ ಪರಿಣಾಮ ಬೀರುತ್ತಿದೆ.
ಪರಾಗಸ್ಪರ್ಶಕ್ಕೆ ಮುಖ್ಯ ಕಾರಣ ಜೇನು ಹುಳುಗಳು. ಕೀಟನಾಶಕ ಸಿಂಪಡಣೆಯಿಂದಾಗಿ ಜೇನು ಹುಳುಗಳು ಸಾಯುತ್ತಿವೆ. ಇದರಿಂದಾಗಿ ಸರಿಯಾದ ಪರಾಗಸ್ಪರ್ಶ ಕ್ರಿಯೆ ನಡೆಯುತ್ತಿಲ್ಲ. ಅಲ್ಲದೆ ಕಾಯಿಗಳು ಸಣ್ಣವಾಗಿದ್ದಾಗ ಮೃದುವಾಗಿರುತ್ತವೆ. ಈ ಸಮಯದಲ್ಲಿ ಕೀಟಗಳು ಕೂಡ ಆರಾಮವಾಗಿ ಕಾಯಿಗಳನ್ನ ಕೊರೆಯುವುದರಿಂದ ಅಡಿಕೆ ಕಾಯಿಗಳು ಉದುರುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ವರ್ಷ ಅಡಿಕೆ ಬೆಳೆ ಕಡಿಮೆಯಾಗುತ್ತೆ ಅಂತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.
ಒಟ್ಟಿನಲ್ಲಿ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಅನ್ನೋ ಗಾದೆ ಮಲೆನಾಡ ಅಡಿಕೆ ಬೆಳೆಗಾರರ ಪಾಲಿಗೆ ಅಕ್ಷರಶಃ ಸತ್ಯವಾಗಿದೆ. ಇವರ ಕಷ್ಟಗಳನ್ನ ಆಲಿಸಬೇಕಾದ ಸರ್ಕಾರ ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇಲಾಖೆಗಳು ಇವರ ಕಷ್ಟಗಳನ್ನ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದು, ಮಿಳ್ಳೆ ಉದುರುವ ರೋಗಕ್ಕೆ ಶಾಶ್ವತ ಪರಿಹಾರ ನೀಡಬೇಕಿದೆ.