ಭಟ್ಕಳ(ಉತ್ತರ ಕನ್ನಡ): ತಾಲೂಕಿನಲ್ಲಿ ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿದ್ದು, ಭಟ್ಕಳದಲ್ಲಿ ಫ್ಯಾಕ್ಟರಿ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಮಾಡಿಕೊಡುವ ಕುರಿತು ಶಾಸಕ ಸುನಿಲ್ ನಾಯ್ಕ ಅವರಿಗೆ ಭಟ್ಕಳ ಹೊನ್ನಾವರ ಭಾಗದ ಸ್ಥಳೀಯ ಯುವಕರು ಶಿರಾಲಿಯ ಶಾಸಕರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದೆ. ಭಟ್ಕಳ ತಾಲೂಕಿನಲ್ಲಿ ಸಾವಿರಾರು ಯುವಜನರು ಐಟಿಐ, ಎಂಜಿನಿಯರಿಂಗ್, ಡಿಗ್ರಿ, ಡಿಪ್ಲೋಮಾ ಮುಗಿಸಿ ನಗರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ತಮ್ಮ ಕಾಲ ಮೇಲೆ ತಾಔಉ ನಿಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಈ ಮಹಾಮಾರಿ ಕೋವಿಡ್-19ನಿಂದಾಗಿ ಸದ್ಯ ಉದ್ಯೋಗವನ್ನು ಬಿಟ್ಟು ತಮ್ಮ ಊರಿಗೆ ಮರಳುವ ಅನಿವಾರ್ಯತೆ ಬಂದೊದಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ ಎಂದು ಯುವಕರು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ಹೊರ ಬರಲು ಉತ್ತಮ ಉಪಾಯಗಳು ಕೂಡ ಇವೆ ಎಂದ ಅವರು, ಭಟ್ಕಳ ತಾಲೂಕಿನಲ್ಲಿ ಸಾಕಷ್ಟು ಜಮೀನು ಇದೆ. ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಉದ್ದಿಮೆಯನ್ನು ಸ್ಥಾಪಿಸಿದ್ದಲ್ಲಿ ನಮ್ಮ ಭಾಗದ ಯುವ ಜನರಿಗೆ ಸಂಜೀವಿನಿಯಾಗುವುದರಲ್ಲಿ ಸಂಶಯವಿಲ್ಲ. ಇಲ್ಲವೇ ಯಾವುದೇ ಖಾಸಗಿ ಕಂಪನಿ ಮುಂದೆ ಬಂದರೂ ಸಹ ಸ್ಥಳೀಯರಿಗೆ ಆದ್ಯತೆ ನೀಡುವ ಷರತ್ತಿನೊಂದಿಗೆ ಉದ್ದಿಮೆ ಆರಂಭಿಸಲು ಅನುಕೂಲ ಮಾಡಿಕೊಡಬೇಕಾಗಿ ಶಾಸಕರಲ್ಲಿ ಮನವಿ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಈ ಬಗ್ಗೆ ನನ್ನ ಕಡೆಯಿಂದ ಪ್ರಯತ್ನ ನಡೆದಿದೆ. ಸರಿಯಾದ ಸ್ಥಳಾವಕಾಶದ ಕೊರತೆಯಿಂದ ಸಾಕಷ್ಟು ತೊಡಕಾಗಿದೆ. ಈ ಬಗ್ಗೆ ಮತ್ತೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಫ್ಯಾಕ್ಟರಿ ನಿರ್ಮಿಸುವ ಪ್ರಯತ್ನ ಮಾಡಲಿದ್ದೇನೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಶೇಷ ವ್ಯವಸ್ಥೆ ಮಾಡುವ ಕೆಲಸ ಮಾಡಲಿದ್ದೇನೆ ಎಂದರು.