ಕಾರವಾರ: ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆನಂದ್ ಅಸ್ನೋಟಿಕರ್ ಕುಟುಂಬ ರಾಜಕೀಯವಾಗಿ ಅಧಿಕಾರಕ್ಕೆ ಬಂದ ಬಳಿಕ ಸಾವಿರಾರು ಕೋಟಿ ಆಸ್ತಿ ಸಂಪಾದಿಸಿದ್ದು ಹೇಗೆ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯಕ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆನಂದ್ ಅಸ್ನೋಟಿಕರ್ ಕುಟುಂಬ ಬಾಡಿಗೆ ಮನೆಯಲ್ಲಿತ್ತು. ಆದರೆ ವಸಂತ್ ಅಸ್ನೋಟಿಕರ್ ಶಾಸಕರಾಗಿ, ಅವರ ಪತ್ನಿ ಶುಭಲತಾ ಅಸ್ನೋಟಿಕರ್ ವಿಧಾನ ಪರಿಷತ್ ಸದಸ್ಯೆಯಾಗಿ, ಆನಂದ್ ಅಸ್ನೋಟಿಕರ್ ಶಾಸಕರು ಸಚಿವರು ಆದ ಈ 23 ವರ್ಷಗಳಲ್ಲಿ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಅಲ್ಲದೆ ಆನಂದ್ ಅಸ್ನೋಟಿಕರ್ 10 ವರ್ಷದ ಮಗನ ಬಳಿಯೂ ಕೋಟಿ ರೂ ಆಸ್ತಿ ಇದೆ. ಇಷ್ಟೊಂದು ಆಸ್ತಿ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಅವರು ವಸಂತ್ ಅಸ್ನೋಟಿಕರ್ ಅವರನ್ನು ತಮ್ಮನಂತೆ ನೋಡಿಕೊಂಡಿದ್ದರು. ಆದರೆ ಅಸ್ನೋಟಿಕರ್ ಕುಟುಂಬ ಬಂಗಾರಪ್ಪ ಸೇರಿದಂತೆ ತಮಗೆ ಸಹಾಯ ಮಾಡಿದ ಎಲ್ಲಿರಿಗೂ ಮೋಸ ಮಾಡಿದೆ. ಸ್ವಾರ್ಥ ರಾಜಕಾರಣ ಮಾಡುವ ಆನಂದ 5 ವರ್ಷದಲ್ಲಿ ಮೂರು ಪಕ್ಷ ಬದಲಿಸಿದ್ದಾರೆ. ಈ ಹಿಂದೆ ಮೀನುಗಾರಿಕಾ ಸಚಿವರಾಗಿದ್ದ ಆನಂದ್ ಮೀನುಗಾರ ಮಹಿಳೆಯರ ಮೇಲೆ ಪೊಲೀಸರನ್ನು ಛೂ ಬಿಟ್ಟಿದ್ದರು. ಅಲ್ಲದೆ ಅಣು ವಿದ್ಯುತ್ ಸ್ಥಾವರ ಹೋರಾಟದ ವೇಳೆ ಜನರನ್ನು ಜೈಲಿಗೆ ಅಟ್ಟಿದರು ಎಂದು ಆರೋಪಿಸಿದರು.
ಉದ್ಯೋಗ ಸ್ಥಾಪನೆ ಮಾಡಿಲ್ಲ ಎಂದು ಅನಂತ್ಕುಮಾರ್ ಅವರ ಬಗ್ಗೆ ಆರೋಪಿಸುವ ಆನಂದ್, ತಮ್ಮ ಕುಟುಂಬ 23 ವರ್ಷ ಅಧಿಕಾರದಲ್ಲಿತ್ತು. ನೀವು ಎಷ್ಟು ಉದ್ದೋಗ ಸೃಷ್ಠಿಸಿದ್ದೀರಾ. ನಿಮ್ಮ ಸಾಧನೆ ಏನು ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.