ಕಾರವಾರ: ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮುಜರಾಯಿ ಇಲಾಖೆಗೆ ಸೇರಿದ ರಾಜ್ಯದ ಎಲ್ಲಾ ದೇವಾಲಯಗಳನ್ನು ನಾಳೆಯಿಂದ ತೆರೆಯಲಾಗುತ್ತದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅಂಕೋಲಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಮುಜರಾಯಿ ಇಲಾಖೆಯಡಿ ಬರುವ ಎಲ್ಲಾ ದೇವಾಲಯಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಿವಾರ್ಯ ಕಾರಣಗಳಿದ್ದಲ್ಲಿ ಅಂತಹ ದೇವಸ್ಥಾನಗಳನ್ನು ಸ್ವಲ್ಪ ದಿನ ಬಿಟ್ಟು ತೆರೆಯಲಾಗುತ್ತದೆ. ಈಗಾಗಲೇ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಅಗತ್ಯ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ತಿಳಿಸಲಾಗಿದೆ ಎಂದರು.
ಕೆಲ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಆಡಳಿತ ಮಂಡಳಿಗೆ ಆತಂಕವಿದೆ. ಅಂತಹ ದೇವಾಲಯಗಳಲ್ಲಿ ಮೊದಲು ಕೇವಲ ಸ್ಥಳೀಯರಿಗೆ ಅವಕಾಶ ಮಾಡಿಕೊಡಲು ತಿಳಿಸಲಾಗಿದೆ. ಎಂಟತ್ತು ದಿನಗಳ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದ್ದು, ಬಳಿಕ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.