ಭಟ್ಕಳ: ಬೆಳ್ಳಂಬೆಳಗ್ಗೆ ಸುಮಾರು 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ 10 ತಂಡ ಭಟ್ಕಳದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ, ವಿವಿಧ ಪ್ರಕರಣಗಳ ಆರೋಪಿಗಳು ಹಾಗೂ ಅವರ ಸಹಚರರ ಮನೆಗಳಲ್ಲಿ ತಪಾಸಣೆ ಕೈಗೊಂಡಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನಾ ಪೆನ್ನೇಕರ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್‌ಪಿ ಕೆ. ಯು ಬೆಳ್ಳಿಯಪ್ಪ ನೇತೃತ್ವದಲ್ಲಿ ಭಟ್ಕಳ ನಗರ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ ಪಿ. ಎಂ ಭಟ್ಕಳ ಗ್ರಾಮಾಂತರ ಸಿಪಿಐ ಮಹಾಬಲೇಶ್ವರ ನಾಯ್ಕ ಹಾಗೂ ಇತರ ಉಪವಿಭಾಗದ 10 ಪೊಲೀಸ್ ಅಧಿಕಾರಿಗಳು, 40 ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ 10 ತಂಡವನ್ನು ರಚಿಸಲಾಗಿತ್ತು.
ಈ ತಂಡ ಬೆಳ್ಳಂಬೆಳಗ್ಗೆ ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿದ್ದವರು. ಅಕ್ರಮ ಜಾನುವಾರು ಸಾಗಣೆ, ಗಾಂಜಾ ಮಾರಾಟ, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿಗಳ ಸಹಚರರ ಮನೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಟ್ಕಳ ನಗರ ಪೊಲೀಸ್ ಠಾಣೆ, ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಣೆ, ಗಾಂಜಾ ಮಾರಾಟ, ಮನೆಗಳ್ಳತನ, ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣ ಹಾಗೂ ಉಡುಪಿ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಭಟ್ಕಳ ಗುಳ್ಮಿಯ ಅಕ್ರಮ್ ಸಯ್ಯದ್ ಹಾಗೂ ಭಟ್ಕಳ ನಗರ ಮತ್ತು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮ ಜಾನುವಾರು ಸಾಗಣೆ, ಗಾಂಜಾ ಮಾರಾಟ ಪ್ರಕರಣದ ಆರೋಪಿ ಮೊಹಮ್ಮದ್ ಇಮ್ರಾನ್‌ನನ್ನ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಓದಿ: ಈಜಲು ಹೋಗಿ ಮೆಡಿಕಲ್ ವಿದ್ಯಾರ್ಥಿಗಳು ನಾಪತ್ತೆ.. ಕೆರೆಯಲ್ಲಿ ಮುಳುಗಿರುವ ಶಂಕೆ