ಶಿರಸಿ: ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿ ಕಿಡಿ ಹೊತ್ತಿಸಿದ್ದ ಹೊನ್ನಾವರದ ಪರೇಶ್ ಮೇಸ್ತ ಪ್ರಕರಣದ ಆರೋಪಿಗೆ ವಕ್ಫ್ ಬೋರ್ಡಿನಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ವಾಗ್ವಾದ ನಡೆಯುತ್ತಿದೆ. ಎರಡೂ ಪಕ್ಷಗಳು ಟೀಕೆ ಮತ್ತು ಸಮಜಾಯಿಷಿಯಲ್ಲಿ ತೊಡಗಿಕೊಂಡಿವೆ. ರಾಜಕೀಯವಾಗಿ ಪ್ರಭಾವ ಬೀರುವ ವಿಷಯವಾದ ಕಾರಣ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ.
ಉಪಾಧ್ಯಕ್ಷ ಸ್ಥಾನ ನೀಡುವಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದರು. ಅದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಗಮನಿಸಬೇಕು. ಈ ಬಗ್ಗೆ ಕ್ಷಮೆಯಾಚನೆ ಮಾಡಬೇಕು ಹಾಗೂ ಬಿಜೆಪಿಯ ತಪ್ಪಿಗೆ ಇತರರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಬಿಜೆಪಿಯವರು ತಮ್ಮ ತಪ್ಪನ್ನು ಸಮರ್ಥನೆ ಮಾಡಿಕೊಂಡಿದ್ದು, ವಕ್ಫ್ ಬೋರ್ಡಿನಲ್ಲಿ ಬಹುಮತ ಇಲ್ಲದ ಕಾರಣ ಹೀಗಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಅಣ್ಣಿಗೇರಿ ವಕ್ಫ ಬೋರ್ಡಿಗೆ ಬರಲು ರಾಜ್ಯ ವಕ್ಫ್ ಬೋರ್ಡಿನಲ್ಲಿ ಬಹುಮತ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಮುತವರ್ಜಿ ಇದೆ. ಆದರೆ ನಮ್ಮ ಗಮನಕ್ಕೆ ಬಂದ ತಕ್ಷಣ ಸರಿಪಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ವಕ್ಫ್ ಬೋರ್ಡ್ಗೆ ಪರೇಶ ಮೆಸ್ತಾ ಪ್ರಕರಣದ ಆರೋಪಿ ನೇಮಕ: ವಿರೋಧದ ಬೆನ್ನಲ್ಲೇ ಆದೇಶಕ್ಕೆ ತಡೆ