ಕಾರವಾರ: ಅದು ನೌಕಾನೆಲೆ ಸುಪರ್ದಿಯಲ್ಲಿರುವ ದ್ವೀಪ. ಈ ಹಿಂದೆ ಸ್ಥಳೀಯ ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ದ್ವೀಪದಲ್ಲಿನ ದೇವಸ್ಥಾನ ಹಾಗೂ ಚರ್ಚ್‌ಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ನೌಕಾನೆಲೆ ನಿರ್ಮಾಣವಾದ ಬಳಿಕ ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರ ಪ್ರವೇಶವನ್ನು ನೌಕಾನೆಲೆ ನಿರ್ಭಂದಿಸಿತ್ತು. ಆದ್ರೆ ಇದೀಗ ಗೋವಾ ರಾಜ್ಯದ ಕ್ರಿಶ್ಚಿಯನ್ ಸಮುದಾಯದವರು ದ್ವೀಪಕ್ಕೆ ಪ್ರವೇಶ ನೀಡುವಂತೆ ಮತ್ತೆ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕದ ಕಾಶ್ಮೀರ ಖ್ಯಾತಿಯ ಕಾರವಾರ ಸುತ್ತಲೂ ದ್ವೀಪಗಳಿಂದಲೇ ಆವೃತವಾಗಿರುವ ಪ್ರದೇಶ. ದೇಶದ ಪ್ರತಿಷ್ಠಿತ ಕದಂಬ ನೌಕಾನೆಲೆ ಯೋಜನೆ ಕಾರವಾರದಲ್ಲಿ ಸ್ಥಾಪನೆಯಾದ ಬಳಿಕ ಸಾಕಷ್ಟು ದ್ವೀಪಗಳು ನೌಕಾನೆಲೆ ವ್ಯಾಪ್ತಿಗೆ ಒಳಪಟ್ಟಿವೆ. ಅವುಗಳಲ್ಲಿ ಅಂಜುದೀವ್ ದ್ವೀಪ ಒಂದು. ಈ ದ್ವೀಪ ಹಿಂದೆ ಹಿಂದುಗಳು ಹಾಗೂ ಕ್ರಿಶ್ಚಿಯನ್ನರ ದೇವಾಲಯವನ್ನು ಹೊಂದಿದ್ದರಿಂದ ಧಾರ್ಮಿಕವಾಗಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಆದ್ರೆ ನೌಕಾನೆಲೆ ವ್ಯಾಪ್ತಿಗೆ ಸೇರಿದ ಬಳಿಕ ಅಲ್ಲಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು ಇದೀಗ ಅದೇ ದ್ವೀಪಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ಕ್ರಿಶ್ಚಿಯನ್ ಸಮುದಾಯ ಬೇಡಿಕೆ ಇಟ್ಟಿದೆ.
ಈ ಹಿಂದೆ ಪೋರ್ಚುಗೀಸರ ಆಡಳಿತ ಇದ್ದ ಸಂದರ್ಭದಲ್ಲಿ ಕಾರವಾರ, ಗೋವಾ ಭಾಗದ ಕ್ರಿಶ್ಚಿಯನ್ನರು ಪ್ರತಿವರ್ಷ ಒಂದು ದಿನ ದ್ವೀಪಕ್ಕೆ ಆಗಮಿಸಿ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದರು. ಅಲ್ಲದೇ ಸ್ಥಳೀಯ ಮೀನುಗಾರರು ಹಾಗೂ ವಿವಿಧ ಸಮುದಾಯದವರು ಇಲ್ಲಿನ ಆರ್ಯದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು. 1991ರಲ್ಲಿ ಕಾರವಾರದಲ್ಲಿ ಕದಂಬ ನೌಕಾನೆಲೆ ಯೋಜನೆ ವ್ಯಾಪ್ತಿಗೆ ದ್ವೀಪ ಹಸ್ತಾಂತರವಾಗಿದ್ದು ಕಾಮಗಾರಿ ವೇಳೆ ಸಾರ್ವಜನಿಕರಿಗೆ ದ್ವೀಪಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಬಳಿಕ 2000ರ ನಂತರ ಕದಂಬ ನೌಕಾನೆಲೆ ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿತ್ತು. ಅದರಂತೆ ಅಲ್ಲಿನ ಚರ್ಚ್ ಹಾಗೂ ದೇವಸ್ಥಾನಗಳಿಗೂ ಸಾರ್ವಜನಿಕರು ಆಗಮಿಸದಂತೆ ನಿಷೇಧವನ್ನು ಹೇರಿದೆ. ಆದ್ರೆ ಆ ಪ್ರದೇಶ ಧಾರ್ಮಿಕ ಭಾವನೆಯಿಂದ ಕೂಡಿದ್ದು ವರ್ಷಕ್ಕೆ ಎರಡು ಬಾರಿಯಾದರೂ ತಮಗೆ ಪ್ರಾರ್ಥನೆ ಸಲ್ಲಿಸಿ ತೆರಳಲು ಅವಕಾಶ ನೀಡಬೇಕು ಅಂತಾ ಗೋವಾ ಮೂಲದ ಕ್ರಿಶ್ಚಿಯನ್ ಸಮುದಾಯದವರು ಮನವಿ ಮಾಡಿದ್ದಾರೆ.
ಓದಿ : ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಸುಪ್ರೀಂಕೋರ್ಟ್ ಆದೇಶಕ್ಕೆ ಒಂದು ವರ್ಷ..
ಇನ್ನು ಈ ದ್ವೀಪ ಗೋವಾ ರಾಜ್ಯಕ್ಕೆ ಸೇರಿದ್ದಾಗಿದ್ದು, ಕದಂಬ ಯೋಜನೆ ಬಂದ ಬಳಿಕ ಅದನ್ನು ನೌಕಾನೆಲೆಗೆ ನೀಡಲಾಗಿದೆ. ಅಂಜುದೀವ್ ದ್ವೀಪದಲ್ಲಿ ಮೊದಲು ಅಂಜದುರ್ಗಾ ದೇವಿ ದೇವಸ್ಥಾನ ಇದ್ದಿದ್ದರಿಂದಲೇ ದ್ವೀಪಕ್ಕೆ ಅಂಜುದೀವ್ ಎನ್ನುವ ಹೆಸರು ಬಂದಿದೆ. ಇಲ್ಲಿ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣವಾಗಿದ್ದ ಅವರ್ ಲೇಡಿ ಆಫ್ ಬ್ರೋಥಾಸ್ ಚರ್ಚ್ ಇದ್ದು ಪ್ರತಿವರ್ಷ ಫೆಬ್ರುವರಿ 2ರಂದು ಗೋವಾ ಕ್ರಿಶ್ಚಿಯನ್ನರು ಹಾಗೂ ಸ್ಥಳೀಯರು ಸೇರಿ ಫೆಸ್ಟ್ ಆಚರಿಸುತ್ತಿದ್ದರು. ಆದ್ರೆ ನೌಕಾನೆಲೆ ಬಂದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಭಂದ ಹೇರಿದ್ದರಿಂದ ಧಾರ್ಮಿಕ ಆಚರಣೆಗೆ ಅಡ್ಡಿಯುಂಟಾದಂತಾಗಿದೆ. ಇನ್ನು ವರ್ಷಕ್ಕೊಮ್ಮೆ ನೌಕಾ ದಿನದಂದು ನೌಕಾನೆಲೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಅದರಂತೆ ಫೆಸ್ಟ್ ಸಂದರ್ಭದಲ್ಲಿ ತಮಗೆ ದ್ವೀಪಕ್ಕೆ ಆಗಮಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಅಂತಾ ನೌಕಾನೆಲೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.