ಕಾರವಾರ: ತಾಂತ್ರಿಕ ದೋಷದಿಂದ ಮೂರು ದಿನದಿಂದ ಅರಬ್ಬಿ ಸಮುದ್ರದಲ್ಲಿ ಕೆಟ್ಟು ನಿಂತಿದ್ದ ಯಾಂತ್ರಿಕ ಬೋಟ್ ಹಾಗೂ ಅದರಲ್ಲಿದ್ದ 23 ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಳೆದ ಮಂಗಳವಾರ ರಕ್ಷಣೆ ಮಾಡಿದೆ.
ಭಟ್ಕಳ ಮಾವಿನ ಕುರ್ವಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎನ್ಎಫ್ಜಿ ಹೆಸರಿನ ಬೋಟ್ ಸುಮಾರು 30 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು. ಬೋಟ್ನಲ್ಲಿದ್ದ ಬ್ಯಾಟರಿ ಕೂಡ ಹಾಳಾದ ಪರಿಣಾಮ ವೈರ್ಲೆಸ್ ಸಂಪರ್ಕ ಕಡಿತಗೊಂಡು ಸಂಪರ್ಕ ಸಾಧಿಸಲಾಗದೇ ಮೂರು ದಿನದಿಂದ ಸಮುದ್ರದಲ್ಲಿತ್ತು. ಕೊನೆಗೆ ಈ ಕುರಿತು ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ನ ರಾಜದೂತ ಬೋಟ್ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಬೋಟ್ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಬೋಟ್ ರಿಪೇರಿಗೆ ಪ್ರಯತ್ನಿಸಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಬೆರೊಂದು ಬೋಟ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪವನಸುತ ಬೋಟ್ ಮೂಲಕ ಎನ್ಎಫ್ಜಿ ಬೋಟ್ ಅನ್ನು ಇಂದು ಭಟ್ಕಳ ಬಂದರಿಗೆ ಎಳೆದುಕೊಂಡು ಬರಲಾಗಿದೆ.