ಕಾರವಾರ : ಹಳಿಯಾಳ ತಾಲೂಕಿನ ಗುಂಡೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ಮತ್ತು ಎರಡನೇಯ ತರಗತಿಯ ಹತ್ತಕ್ಕೂ ಹೆಚ್ಚು ಮಕ್ಕಳು ಶಾಲೆ ಬಳಿ ಬೆಳೆದ ಗಿಡದ ವಿಷಕಾರಿ ಬೀಜಗಳನ್ನು ತಿಂದು ಅಸ್ವಸ್ಥರಾದ ಘಟನೆ ನಡೆದಿದ್ದು, ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳು ಅಲ್ಲೇ ಬೇಲಿಯಲ್ಲಿ ಬೆಳೆದ ವಿಷಕಾರಿ ಹಣ್ಣಿನ ಬೀಜವನ್ನು ಶೇಂಗಾ ಬೀಜ ಎಂದು ಭಾವಿಸಿಕೊಂಡು ತಿಂದಿದ್ದಾರೆ. ಮನೆಗೆ ಹೋದ ನಂತರ ಎಲ್ಲ ಮಕ್ಕಳಿಗೆ ವಾಂತಿ ಭೇದಿ ಆರಂಭವಾಗಿದೆ. ಆತಂಕಕೊಳ್ಳಗಾದ ಪಾಲಕರು ಮಕ್ಕಳನ್ನು ಸಮೀಪದ ಸಾಂಬ್ರಾಣಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತದನಂತರ ನಿನ್ನೆ ರಾತ್ರಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ : ಮಧ್ಯಾಹ್ನದ ಬಿಸಿ ಊಟದಲ್ಲಿ ಹಾವು ಪತ್ತೆ : 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಕುಶಾಲ ಸಹದೇವ ಮಿರಾಶಿ, ಮಯೂರ ರಮೇಶ ವಾಡಕರ, ಪ್ರೇಮಾ ಸಹದೇವ ವಾಡಕರ, ಪ್ರತಿಕ್ಷಾ ನಕುಲ ಮಿರಾಶಿ, ಸೇವಂತಿ ರಾಮದಾಸ ಮಿರಾಶಿ, ಹರ್ಷಾ ಅಪ್ಪು ಮಿರಾಶಿ, ರಾಣಿ ವಿಷ್ಣು ಬಾಂದುರ್ಗಿ, ಸುಮತ ನಿಂಗಪ್ಪಾ ಶಿಗ್ನೋಳಕರ, ಕೃತಿಕಾ ಮಾರುತಿ ದೇಸೂರಕರ, ವಿನೂತಾ ನಾರಾಯಣ ಕಮ್ಮಾರ ಹಾಗೂ ವಸುಂದರಾ ನಾರಾಯಣ ಕಮ್ಮಾರ ಅಸ್ವಸ್ಥರಾದ ಮಕ್ಕಳು ಎನ್ನಲಾಗಿದೆ .
ಇದನ್ನೂ ಓದಿ : ಶಿವಮೊಗ್ಗ : ಮಧ್ಯಾಹ್ನದ ಊಟ ಸೇವಿಸಿ 60 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ರಾತ್ರಿ ಪಾಳಿಯಲ್ಲಿದ್ದ ಡಾ.ಗಣೇಶ ಅರಶೀಣಗೇರಿ ಅಸ್ವಸ್ಥರಾದ ಮಕ್ಕಳಿಗೆ ಚಿಕಿತ್ಸೆ ನೀಡಿದರು. ಘಟನೆ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸಿಪಿಐ ಸುರೇಶ ಶಿಂಗಿ, ಪಿಎಸ್ಐ ವಿನೋದ ರೆಡ್ಡಿ, ಅಪರಾದ ವಿಭಾಗದ ಪಿಎಸ್ಐ ಅನಿಸಸಾಬ ಅತ್ತಾರ ಭೇಟಿ ನೀಡಿ ಪ್ರಕರಣದ ಪರಿಶೀಲನೆ ನಡೆಸಿದರು. ಹಾಗೆಯೇ, ಬಿಇಒ ವಿನೋದ ಮಹಾಲೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯ್ಕ ಬಾವಿಕೇರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ, ವೆಂಕಟೇಶ ನಾಯ್ಕ ಹಾಗೂ ಶಿಕ್ಷಕರ ವೃಂದದವರು ಮತ್ತು ಗ್ರಾಮದ ಪ್ರಮುಖರು ತಡರಾತ್ರಿಯವರೆಗೂ ಆಸ್ಪತ್ರೆಯಲ್ಲಿದ್ದು, ಪಾಲಕರಿಗೆ ಧೈರ್ಯ ತುಂಬಿದರು. ಚಿಕಿತ್ಸೆ ಬಳಿಕ ಗುಣಮುಖರಾದ ಕೆಲ ಮಕ್ಕಳನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ : ಬಿಹಾರ : ಮಧ್ಯಾಹ್ನದ ಬಿಸಿಯೂಟ ತಿಂದ 150 ಮಕ್ಕಳು ಅಸ್ವಸ್ಥ
ಇನ್ನು ಇದೇ ತಿಂಗಳ ಒಂದನೇ ತಾರೀಖಿನಂದು ಬಿಹಾರದ ಬಗಾಹಾದ ನರ್ವಾಲ್-ಬರ್ವಾಲ್ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ 150 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿತ್ತು. ತಕ್ಷಣ ಮಕ್ಕಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ಆರೋಗ್ಯ ಹದಗೆಟ್ಟ ಹಿನ್ನೆಲೆ ಪೋಷಕರು ಶಾಲೆಯಲ್ಲಿ ಗಲಾಟೆ ನಡೆಸಿದ್ದರು. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ : ಮಧ್ಯಾಹ್ನದ ಬಿಸಿಯೂಟ ಸೇವಿಸಿ 36 ಶಾಲಾ ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು