ಭಟ್ಕಳ/ಉತ್ತರ ಕನ್ನಡ: ಅಂಕೋಲಾ ಹೊನ್ನಾವರ ಭಾಗದಿಂದ ಭಟ್ಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 10 ಎಮ್ಮೆ ಹಾಗೂ ಒಂದು ಕರುವನ್ನು ಪೊಲೀಸರು ರಕ್ಷಿಸಿದ್ದಾರೆ.
ಕಸಾಯಿಖಾನೆಗೆ ಸಾಗಣೆ ಮಾಡುವ ಉದ್ದೇಶದಿಂದ ಮೀನು ತುಂಬುವ ಲಾರಿ(ಕಂಟೇನರ್)ಯಲ್ಲಿ 10 ಎಮ್ಮೆ ಹಾಗೂ ಒಂದು ಕರು ಅಕ್ರಮವಾಗಿ ಸಾಗಣೆ ಮಾಡುವ ವೇಳೆ ಮಂಕಿ ಪಿಎಸ್ಐ ಅವರ ಖಚಿತ ಮಾಹಿತಿ ಮೇರೆಗೆ ಮಂಕಿ ಪೊಲೀಸರು ಹಾಗೂ ಭಟ್ಕಳ ಪೊಲೀಸರು ಕಾರ್ಯಾಚರಣೆ ನಡೆಸಿ ಭಟ್ಕಳದ ಡೊಂಗರಪಳ್ಳಿ ಸಮೀಪ ಮೀನು ಲಾರಿಯನ್ನು ಅಡ್ಡಗಟ್ಟಿ ಜಾನುವಾರುಗಳನ್ನು ವಶಕ್ಕೆ ಪಡೆಯಲಾಯಿತು.
ಈ ವೇಳೆ, ಲಾರಿ ಚಾಲಕ ಬ್ಯಾರಿಕೇಡ್ ಲೆಕ್ಕಿಸದೇ ಪೊಲೀಸರ ಮೇಲೆ ನುಗ್ಗಿಸಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿರಾಲಿ ಚೆಕ್ಪೋಸ್ಟ್ಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಆದರೆ ಶಿರಾಲಿಯಲ್ಲಿಯೂ ಚಾಲಕ ಬ್ಯಾರಿಕೇಡ್ಗೆ ನುಗ್ಗಿಸಿ ಲಾರಿಯ ಮುಂದಿದ್ದ ಖಾಸಗಿ ಅವರ ಬುಲೋರೋ ವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲಿಂದಲೂ ಪರಾರಿಯಾಗಿದ್ದರು. ಆದರೆ ಇದಾಗ ಬಳಿಕ ಭಟ್ಕಳ ಪೊಲೀಸರು ಲಾರಿಯನ್ನು ಹಿಂಬಾಲಿಸಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ. ಭಟ್ಕಳದ ಡೊಂಗರಪಳ್ಳಿ ಬಳಿ ಅಡ್ಡಗಟ್ಟಿ ವಾಹನ ಚಾಲಕನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಾಹನದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ನಡುವೆ ಮೀನು ಲಾರಿಯನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.