ಉಡುಪಿ: ಅನಾರೋಗ್ಯ ಹಿನ್ನೆಲೆ ಪೇಜಾವರ ಶ್ರೀ ವಿಶ್ವೇಶತೀರ್ಥರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಇಂದಿಗೆ ಮೂರನೇ ದಿನವಾಗಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮಂತ್ರಾಲಯ ಮಠಾಧೀಶ ಸಭುದೇಂದ್ರ ತೀರ್ಥರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಸ್ಪೀಕರ್, ಶ್ರೀಗಳು ಗುಣಮುಖರಾಗುವಂತೆ ಕೋಟಿ ಕೋಟಿ ಜನರು ಪ್ರಾರ್ಥಿಸುತ್ತಿದ್ದಾರೆ. ಅವರ ಆರೋಗ್ಯ ಸುಧಾರಣೆ ಆಗುತ್ತೆಯೆಂಬ ವಿಶ್ವಾಸವಿದೆ. ರಾಷ್ಟ್ರ ಕಾರ್ಯದಲ್ಲಿ ಪೇಜಾವರ ಶ್ರೀಗಳದ್ದು ದೊಡ್ಡ ಕೊಡುಗೆಯಿದೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಾರೆ. ನಿಧಾನಗತಿಯಲ್ಲಿ ಸ್ಪಂದಿಸುತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಸುಭುದೇಂದ್ರ ತೀರ್ಥರು ಮಾತನಾಡಿ, ಶ್ರೀಗಳನ್ನು ಕಣ್ಣಾರೆ ನೋಡಿ ಈಗ ತೃಪ್ತಿ ಆಯಿತು. ಕ್ರಮ ಕ್ರಮವಾಗಿ ಗುಣಮುಖರಾಗುತ್ತಿದ್ದಾರೆ. ಮಠದ ವತಿಯಿಂದ ಹೋಮ, ಜಪ, ಧಾರ್ಮಿಕ ವಿಧಿ ವಿಧಾನ ಏರ್ಪಡಿಸಿದ್ದೇವೆ. ಶಾಖಾಮಠ, ಭಕ್ತರು, ವಿದ್ವಾಂಸರಿಗೆ ಕರೆ ಕೊಟ್ಟಿದ್ದೇವೆ. ವೈದ್ಯ ತಂಡ ತುಂಬಾ ಶ್ರಮ ವಹಿಸುತ್ತಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಕಿರಿಯ ಸ್ವಾಮೀಜಿಗಳಿಗೂ ದೈರ್ಯ ನೀಡಿದ್ದೇವೆ. ದೇವರು ಅವರನ್ನು ಬೇಗ ಗುಣಮುಖವಾಗುವಂತೆ ಮಾಡಲಿ ಎಂದು ಪ್ರಾರ್ಥಿಸಿದರು.
ಪೇಜಾವ ಶ್ರೀಗಳು ರಾಮಮಂದಿರಕ್ಕೆ ಧಾರ್ಮಿಕ, ಲೌಕಿಕ ಹೋರಾಟ ಮಾಡಿದ ಹಿರಿಯ ವ್ಯಕ್ತಿ, ತೀರ್ಪು ಹಿನ್ನಲೆ ಶೀಘ್ರ ರಾಮ ಮಂದಿರ ನಿರ್ಮಾಣವಾಗಲಿ. ಪೇಜಾವರ ಶ್ರೀಗಳೇ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿ ಅಂತಾ ಶ್ರೀಗಳು ತಿಳಿಸಿದರು.