ಉಡುಪಿ: ಗ್ರಾಮದ ಗಡಿಯಲ್ಲಿ ಹಾಕಲಾದ ಪೊಲೀಸ್ ಬ್ಯಾರಿಕೇಡ್ ಬಳಿ ಯುವಕನೊಬ್ಬ ಜಿಲ್ಲಾಡಳಿತ ನಿಯಮ ಉಲ್ಲಂಘನೆ ಮಾಡುತ್ತಿರುವುದನ್ನು ಪ್ರಶ್ನಿಸಿ ಗಲಾಟೆ ಮಾಡಿದ ವಿಡಿಯೋ ಭಾರೀ ವೈರಲ್ ಆಗಿದೆ. ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಕಂಬದಕೋಣೆ ಗ್ರಾಮದಲ್ಲಿ ಗಡಿಯಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಕಂಬದಕೋಣೆ ಗ್ರಾಮವನ್ನು ಕೊರೊನಾ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲಾಗಿತ್ತು. ಅಲ್ಲದೇ ಗ್ರಾಮವನ್ನು ಪ್ರವೇಶ ಮಾಡುವ ಗಡಿಗಳಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾತ್ತು. ಅಲ್ಲಿಗೆ ಬಂದ ಗ್ರಾಮದ ಯುವಕನೊಬ್ಬ, "ನೀವು ಎಲ್ಲರಿಗೂ ಒಂದೇ ನಿಯಮ ಮಾಡಿ, ಶ್ರೀಮಂತರಿಗೆ ನಿಮ್ಮ ನಿಯಮ ಅನ್ವಯ ಆಗೋದಿಲ್ಲ, ಬಡವರಿಗೆ ಮಾತ್ರ ನಿಯಮ ಮಾಡ್ತೀರಿ, ರೂಲ್ಸ್ ಅಂದ್ರೆ ಎಲ್ಲರಿಗೂ ಒಂದೇ ಅಂತ" ಹೇಳಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಯುವಕನೊಬ್ಬ ಯುವಕನಿಗೆ ಹೊಡೆಯಲು ಮುಂದಾಗಿದ್ದು ಕೂಡ ವಿಡಿಯೋದಲ್ಲಿ ಇದೆ. ಘಟನಾ ಸ್ಥಳದಲ್ಲಿ ಪೊಲೀಸ್ ಬ್ಯಾರಿಕೇಡ್ ಇದ್ರೂ ಪೊಲೀಸರು ಇರಲಿಲ್ಲ. ಅಲ್ಲದೇ ಇಷ್ಟು ಜನ ಯುವಕರು ಗ್ರಾಮ ಕಾಯುವ ಅವಶ್ಯಕತೆ ಏನಿದೆ ಎನ್ನುವ ಪ್ರಶ್ನೆ ಕೂಡ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಘಟನೆಯನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.