ಉಡುಪಿ: ಕರಾವಳಿಯಲ್ಲಿ ವಿಜಯದಶಮಿ ಪೋಷಕರ ಪಾಲಿಗೆ 'ವಿದ್ಯಾದಶಮಿ'. ಕೊಲ್ಲೂರು, ಶ್ರಿಂಗೇರಿಯಲ್ಲಿ ಈ ಸುದಿನ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ರೂಢಿಗತ ಸಂಪ್ರದಾಯ. ಇವತ್ತು ಇತಿಹಾಸ ಪ್ರಸಿದ್ಧ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಸಂಭ್ರಮವಿತ್ತು.
ವಿಜಯದಶಮಿಯನ್ನು ವಿದ್ಯಾದಶಮಿ ಎಂದು ಆಚರಿಸೋದು ಕರಾವಳಿಯ ವಾಡಿಕೆ. ಶಕ್ತಿಯ ಆರಾಧನೆ ನಡೆಯುವ ಕೊಲ್ಲೂರು ಮತ್ತು ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ದಶಮಿಯಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತೆ. ಮಕ್ಕಳ ಭವಿಷ್ಯದ ಬಗ್ಗೆ ಸುಂದರ ಕನಸು ಹೊತ್ತ ಪೋಷಕರು ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಿದ್ರೆ ಮಕ್ಕಳಲ್ಲಿ ಜ್ಞಾನ ಸಮೃದ್ಧಿಯಾಗುತ್ತೆ ಅನ್ನೋದು ನಂಬಿಕೆ. ಹಾಗಾಗಿ ದೇವಿಯ ಆಲಯಗಳಲ್ಲಿ ಸಾವಿರಾರು ಪೋಷಕರು ಮಕ್ಕಳಿಗೆ ವಿದ್ಯಾರಂಭ ಸಂಪ್ರದಾಯವನ್ನು ನೆರವೇರಿಸುತ್ತಾರೆ. ಉಡುಪಿಯ ಪ್ರಸಿದ್ದ ಶಕ್ತಿ ಕೇಂದ್ರವಾಗಿರುವ ಕೊಲ್ಲೂರು ಮುಕಾಂಬಿಕಾ ಸನ್ನಿಧಿ ಮತ್ತು ಅಂಬಲಪಾಡಿಯ ಜನಾರ್ಧನ ಮಹಾಕಾಳಿ ದೇವಸ್ಥಾನದಲ್ಲಿ ಸಾವಿರಾರು ಪೋಷಕರು ಪುಟ್ಟಪುಟ್ಟ ಮಕ್ಕಳನ್ನು ತೋಳಲ್ಲಿ ಹೊತ್ತು ಬಂದು, ದೇವಿಯ ಸನ್ನಿಧಾನದಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಅದರಲ್ಲೂ ಕೇರಳಿಗರು ಮುಕಾಂಬಿಕಾ ಸನ್ನಿಧಿಯಲ್ಲಿ ವಿದ್ಯಾರಂಭ ಮಾಡಿಸಲು ಶೃದ್ಧೆಯಿಂದ ಮುಗಿಬೀಳುತ್ತಾರೆ.
ತಾಯಂದಿರು ದೇವರ ಸಮ್ಮುಖದಲ್ಲಿ ಕುಳಿತು, ಹರವಿದ ಅಕ್ಕಿಯ ರಾಶಿಯಲ್ಲಿ ಮಕ್ಕಳ ಮೂಲಕ ಅಕ್ಷರ ಮೂಡಿಸುವುದು ವಿದ್ಯಾರಂಭದ ವಿಶಿಷ್ಟ ಸಂಪ್ರದಾಯ. ಓಂಕಾರ, ಶ್ರೀಕಾರಗಳನ್ನು ಬರೆದು, ಬಳಿಕ ಕನ್ನಡ ಅಕ್ಷರಮಾಲೆಯನ್ನು ಅಕ್ಕಿಯ ರಾಶಿಯಲ್ಲಿ ಮೂಡಿಸುವುದು ಪದ್ಧತಿ. ಕೊಲ್ಲೂರಿನ ಸರಸ್ವತಿ ಮಂಟಪದಲ್ಲಿ ಪ್ರತಿ ವರ್ಷವೂ ಈ ಧಾರ್ಮಿಕ ವಿಧಿ ನಡೆಯುತ್ತೆ. ಮಹಾನವಮಿಯ ರಥೋತ್ಸವ ಮತ್ತು ವಿಜಯ ದಶಮಿಯಂದು ಅಕ್ಷರಾಭ್ಯಾಸಕ್ಕೆಂದೇ ಜನ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.