ಉಡುಪಿ : ಕಸ ಮತ್ತು ತ್ಯಾಜ್ಯದ ವಿಲೇವಾರಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ದೇಶದಲ್ಲಿ ಸ್ವಚ್ಛ ಭಾರತ ಯೋಜನೆ ಜಾರಿಗೆ ಬಂದ ನಂತರ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿದರೂ ಎಲ್ಲರಲ್ಲಿ ಈ ಪ್ರಜ್ಞೆ ಇನ್ನೂ ಮೂಡಿಲ್ಲ. ಅದಕ್ಕೆ ಸಾಕ್ಷಿ ಎಂಬಂತಿದೆ ಈ ಕಸದ ರಾಶಿ.
ಹೌದು, ಉಡುಪಿ ಜಿಲ್ಲೆಯ ರಸ್ತೆ, ಸೇತುವೆ, ಹೆದ್ದಾರಿ ಉದ್ದಕ್ಕೂ ಎಲ್ಲೆಂದರಲ್ಲಿ ಕಸದ ರಾಶಿಗಳೇ ಕಾಣಸಿಗುತ್ತವೆ. ವಿದ್ಯಾವಂತರೇ ಸೃಷ್ಟಿಸಿದ ಈ ಕಸದ ರಾಶಿ, ತ್ಯಾಜ್ಯಗಳು ರಸ್ತೆ, ಸೇತುವೆಗಳ ಇಕ್ಕೆಲಗಳಲ್ಲಿ ರಾಶಿ ರಾಶಿಯಾಗಿ ಕಸ ಬೀಳುತ್ತಿದ್ದು ಮಳೆಗಾಲದಲ್ಲಿ ನದಿಗೆ ಸೇರಿ ಸಾಂಕ್ರಾಮಿಕ ರೋಗಕ್ಕೂ ಕಾರಣವಾಗುತ್ತಿದೆ. ಇದನ್ನು ಅರಿತ ಸ್ಥಳೀಯ ಯುವ ಸಂಘಟನೆಗಳು 'ಸೀತಾ ನದಿ ಉಳಿಸಿ' ಅಭಿಯಾನದಡಿಯಲ್ಲಿ ಮಾಬುಕಳ ಸೇತುವೆಯ ಎಡ ಬಲ ಬದಿಯ ರಾಶಿ ಕಸ ಮತ್ತು ತಾಜ್ಯವನ್ನು ಶ್ರಮದಾನದ ಮೂಲಕ ತೆರವುಗೊಳಿಸಿದರು.
ಸಾಸ್ತಾನದ ಬಾಂಧವ್ಯ ಬ್ಲಡ್ ಸೇವಾ ಸಂಘ, ಜೇಸಿಐ ಕೋಟ ಬ್ರಿಗೇಡರ್, ಸ್ವಚ್ಛ ಉಡುಪಿ ಅಭಿಯಾನ ಬಳಗ, ಉಡುಪಿ ಆಸರೆ ಹೆಲ್ಪಿಂಗ್ ಹ್ಯಾಂಡ್, ಕರಾವಳಿ ವಜ್ರ ಕೇಸರಿ ತಂಡದ ಸದಸ್ಯರು ಭಾನುವಾರ ಬೆಳಗಿನ ಜಾವದಿಂದ ಸಂಜೆವರೆಗೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನದಿ ಇಕ್ಕೆಲಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಸ್ವಚ್ಛತೆಯ ಅರಿವನ್ನು ಮೂಡಿಸಿದರು. ಕಸದ ತೊಟ್ಟಿಯಂತಾದ ಸೇತುವೆಯ ಎಡ ಬದಿಯನ್ನು ಕಸದಿಂದ ಮುಕ್ತಗೊಳಿಸಿದರು.
ಪರಿಸರದ ಸ್ವಚ್ಛತೆ ಬದುಕಿಗೆ ಅನಿವಾರ್ಯ ಅಂತ ಗೊತ್ತಿದ್ದರೂ ಜಿಲ್ಲೆಯ ವಸತಿ ಸಂಕೀರ್ಣ, ಹೋಟೆಲ್ ತ್ಯಾಜ್ಯಗಳನ್ನು ನದಿಯ ಇಕ್ಕೆಲಗಳಲ್ಲಿ ಬಿಸಾಡಿ ಮಲೀನಗೊಳಿಸುವವರ ವಿರುದ್ಧ ಸ್ಥಳೀಯಾಡಳಿತ ಕಠಿಣ ಕ್ರಮ ಕೈಗೊಂಡರೆ ಮಾತ್ರ ಸ್ವಚ್ಛತೆ ಕಾಪಾಡಲು ಸಾಧ್ಯವಿದೆ. ಒಟ್ಟಾರೆ ಯುವಕ, ಯುವತಿಯರ ಈ ಸ್ವಚ್ಛತಾ ಕಾರ್ಯ ಪರಿಸರ ಪ್ರೇಮಿಗಳಿಗೆ ಖುಷಿ ಕೊಟ್ಟಿದ್ದು, ಕಸ ತಂದು ರಾಶಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂತು.