ಉಡುಪಿ: ರಾಜ್ಯ ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ನಲ್ಲಿ ಕಲಾವಿದರಿಗೆ ಧನಸಹಾಯ ಘೋಷಿಸಿದೆ. ಆದರೆ, ಫಲಾನುಭವಿಗಳ ವಯೋಮಿತಿ 35 ಆಗಿರಬೇಕೆಂದು ಷರತ್ತು ವಿಧಿಸಿರುವುದು ಸರಿಯಲ್ಲ ಎಂದು ಯಕ್ಷಗಾನ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಾವಳಿ ಭಾಗದಲ್ಲಿ 15 ರ ಹರೆಯದಲ್ಲೇ ಯಕ್ಷಗಾನ ಮೇಳ ಸೇರುವ ಯುವ ಕಲಾವಿದರಿದ್ಧಾರೆ. ಉಡುಪಿ ಜಿಲ್ಲೆಯೊಂದರಲ್ಲೇ 10-20 ವರ್ಷಗಳಿಂದ ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿರುವ 35 ವರ್ಷಕ್ಕಿಂತ ಕೆಳಗಿನ ವಯೋಮಿತಿಯ ಸುಮಾರು 200 ಮಂದಿ ಕಲಾವಿದರಿದ್ದಾರೆ. ಸರ್ಕಾರದ ಸಹಾಯಧನ ಪಡೆಯಲು ವಯೋಮಿತಿ ನಿಗದಿಪಡಿಸಿರುವುದರಿಂದ ಈ ಯುವ ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂದು ಯಕ್ಷಗಾನ ಕಲಾವಿದರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾರ್ಭಟ: ಸುಸಜ್ಜಿದ ಆ್ಯಂಬುಲೆನ್ಸ್ ಖರೀದಿಗೆ ದೇಣಿಗೆ ನೀಡಿದ ಉಡುಪಿ ಕೃಷ್ಣಮಠ
ವರ್ಷದ ಏಳು ತಿಂಗಳು ರಾತ್ರಿ ಯಕ್ಷಗಾನ ಸೇವೆ ನೀಡುವ ಯುವ ಕಲಾವಿದರು, ಲಾಕ್ ಡೌನ್ ಕಾರಣದಿಂದ ಮೇಳಗಳು ನಡೆಯದೆ ಅತಂತ್ರರಾಗಿದ್ದಾರೆ. ಇಂತವರು ಸರ್ಕಾರದ ಸಹಾಯಧನ ಪಡೆಯೋಣವೆಂದರೆ, ವಯಸ್ಸಿನ ಮಿತಿ ಅಡ್ಡಿಯಾಗುತ್ತಿದೆ. ಆದ್ದರಿಂದ, ಸಹಾಯಧನ ಪಡೆಯುವ ಕಲಾವಿದರ ವಯೋಮಿತಿಯನ್ನು 25 ವರ್ಷಕ್ಕೆ ಇಳಿಸಬೇಕು ಎಂದು ಸುಮಾರು 40 ವೃತ್ತಿಪರ ಮೇಳಗಳ ಕಲಾವಿದರ ಪರವಾಗಿ ಯಕ್ಷಗಾನಕಲಾ ಸಂಘದ ಕಾರ್ಯದರ್ಶಿ ಮುರುಳೀಧರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.