ಉಡುಪಿ: ನಗರದ ಖಾಸಗಿ ಕಾಲೇಜೊಂದರಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ರೀತಿಯ ಸುಳ್ಳು ಸುದ್ದಿ ಹರಿಬಿಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಕಾಲೇಜಿನ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಡಳಿತ ಮಂಡಳಿ ಸದಸ್ಯರು, ಪ್ರಕರಣಕ್ಕೆ ಸಂಬಂಧಿಸಿದ ಮೂವರು ವಿದ್ಯಾರ್ಥಿನಿಯರು ಒಂದೇ ಕ್ಲಾಸ್ ನವರಾಗಿದ್ದು, ಇನ್ನೊಬ್ಬ ಹುಡುಗಿ ಬೇರೆ ಕ್ಲಾಸ್ನವಳು. ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಮೊಬೈಲ್ ಬ್ಯಾನ್ ಮಾಡಿದ್ದೇವೆ. ಮೊಬೈಲ್ ತಂದದ್ದು, ಶೂಟ್ ಮಾಡಿದ್ದು ತಪ್ಪು. ಹಾಗಾಗಿ ಮೂವರನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ನಮಗೂ ಈ ವಿಚಾರ ತಿಳಿದ ಕೂಡಲೇ ವಿಚಾರಣೆ ಕೂಡಾ ಮಾಡಿದ್ದೇವೆ. ಆದರೆ, ಇಲ್ಲಿ ಸಂತ್ರಸ್ತೆ ಯಾವುದೇ ದೂರು ಕೊಟ್ಟಿಲ್ಲ. ತಮಾಷೆಗೆ ಮಾಡಿರುವುದರಿಂದ ನನ್ನ ಭವಿಷ್ಯ, ಆ ಮೂವರ ಭವಿಷ್ಯ ಮುಖ್ಯ ಅಂತ ಸಂತ್ರಸ್ತೆ ಬರೆದು ಕೊಟ್ಟಿದ್ದಾಳೆ, ಆಗಲೇ ನಾನು ಆ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿ ಸದಸ್ಯರು ಸ್ಪಷ್ಟೀಕರಣ ನೀಡಿದ್ದಾರೆ.
ಇನ್ನು ವಿದ್ಯಾರ್ಥಿನಿಯರು ಶೂಟ್ ಮಾಡಿದ ದೃಶ್ಯಗಳು ಎಲ್ಲಿಯೂ ಶೇರ್ ಆಗಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ರೀತಿಯಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಸತ್ಯವನ್ನು ತಿಳಿದುಕೊಳ್ಳದೇ ಕಾಲೇಜಿನಲ್ಲಿ ಇಂತಹ ಘಟನೆ ನಡೆದಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ. ಈ ರೀತಿಯ ಸುಳ್ಳು ಸುದ್ದಿಯಿಂದ ಮಕ್ಕಳಲ್ಲಿ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಇಂತಹ ಸುದ್ದಿಯನ್ನು ಯಾರೂ ಹಂಚಿಕೊಳ್ಳದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿನಿಯರ ವಿಡಿಯೋ ಮಾಡಲಾಗಿದೆ ಎಂಬುದು ವದಂತಿ. ವಿಚಾರ ತಿಳಿಯದೇ ತಪ್ಪು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಅನಾವಶ್ಯಕವಾಗಿ ಸಾಮಾಜಿಕ ಜಾಲತಾಣದಲ್ಲಿ ಇಂತಹ ಸುದ್ದಿ ಹರಿದಾಡುತ್ತಿರುವುದರಿಂದ ನಾವು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಅಲ್ಲದೇ ಕಾನೂನು ಮೀರಿದ ಕಾರಣ ಮೊಬೈಲ್ ಅನ್ನು ಅವರಿಗೆ ಒಪ್ಪಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಎಸ್ಪಿ ಹೇಳುವುದಿಷ್ಟು: ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿಡಿಯೋ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ನಾವು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ವರೆಗೂ ನಮಗೆ ಅಂತಹ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ. ಹಿಡನ್ ಕ್ಯಾಮೆರಾ ಬಳಸಲಾಗಿದೆ ಅಂತಲೂ ಸುದ್ದಿ ಇದೆ. ಆ ಬಗ್ಗೆಯೂ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಜೊತೆ ಬೇರೆ ಬೇರೆ ಉದ್ದೇಶದಿಂದ ಮಾಹಿತಿಗಳು ಶೇರ್ ಆಗುತ್ತಿವೆ ಎಂದರು.
ವದಂತಿ ಹಬ್ಬಿಸದಂತೆ ಎಸ್ಪಿ ವಾರ್ನಿಂಗ್: ಇಂತಹ ವಿಡಿಯೋ ಹರಿಬಿಟ್ಟು ಬೆದರಿಕೆ ಕೂಡ ಹಾಕುವ ಸಂದರ್ಭ ಇರುವುದರಿಂದ ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಇಟ್ಟಿದೆ. ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕಾಲೇಜಿನದ್ದಲ್ಲ. ಬೇರೆ ಕಡೆಯ ವಿಡಿಯೋ ಶೇರ್ ಆಗುತ್ತಿದೆ. ವಾಯ್ಸ್ ಎಡಿಟ್ ಮಾಡಲಾಗಿದೆ. ಸತ್ಯಾಸತ್ಯತೆ ಗೊತ್ತಿಲ್ಲದೇ ಶೇರ್ ಮಾಡಿದರೆ ತಪ್ಪಾಗುತ್ತದೆ. ವೈರಲ್ ಆಗಿರುವ ಬಗ್ಗೆ ಫೇಸ್ಬುಕ್, ವಾಟ್ಸ್ಆ್ಯಪ್ ಮೇಲೆ ನಿಗಾ ಇರಿಸಲಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ಕ್ರಮ ಕೈಗೊಳ್ಳುತ್ತೇವೆ. ಯಾರೂ ಕೂಡ ಈ ಬಗ್ಗೆ ವದಂತಿ ಹಬ್ಬಿಸಬಾರದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಕೈಗೊಳ್ಳುವುದಾಗಿ ಹೇಳಿದ ಬಿಜೆಪಿ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ , ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜುಲೈ 27ರಂದು ಮಹಿಳಾ ಮೋರ್ಚಾ ಮೂಲಕ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ತೃತೀಯಲಿಂಗಿ ವಿವಾಹವಾದ ಯುವಕನಿಗೆ ಕಾನೂನು ಪ್ರಕಾರ 60 ಲಕ್ಷ ರೂ. ವರದಕ್ಷಿಣೆ..!