ಉಡುಪಿ : ಕೋವಿಡ್ ಸೋಂಕಿತರ ಮನೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬುವ ಕೆಲಸ ಮಾಡಿದರು.
ಬೈಂದೂರು ತಾಲೂಕಿನ ನಾಗಿನಗದ್ದೆ, ಕೋಟೆಮನೆ ಮುಂತಾದ ಪ್ರದೇಶಗಳಿಗೆ ಡಿಸಿ ಜಿ.ಜಗದೀಶ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿದರು. ಬಳಿಕ ನಾಗಿನಗದ್ದೆಯಲ್ಲಿರುವ ಕೊರೊನಾ ಸೋಂಕಿತರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಉಡುಪಿ ಪಟ್ಟಣ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ಇದರಿಂದ ಗ್ರಾಮೀಣ ಭಾಗದಲ್ಲಿನ ಕಾರ್ಯವೈಖರಿಗಳ ಬಗ್ಗೆ ಪರಿಶೀಲನೆ ಹಾಗೂ ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಈಗಾಗಲೇ ಜಿಲ್ಲಾಡಳಿತ ಕೊರೊನಾ ಕುರಿತಂತೆ ಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಚಿಕಿತ್ಸೆ ತಕ್ಷಣದಲ್ಲಿ ದೊರೆಯಲಿದೆ. ಜನರು ಆತಂಕಪಡುವ ಅವಶ್ಯಕತೆಯಿಲ್ಲ. ಬ್ಲ್ಯಾಕ್ ಫಂಗಸ್ಗೆ ಬಗ್ಗೆ ಭಯ ಬೇಡ.
ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಉಸಿರಾಟದ ತೊಂದರೆಯಿದ್ದಲ್ಲಿ ತಕ್ಷಣ ಮಾಹಿತಿ ನೀಡಬೇಕು. ಅನಗತ್ಯ ಸಂಚಾರ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ಶಿರೂರು ಪಿಡಿಒ ಮಂಜುನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.