ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಬೇಟೆ ನಡೆದಿದೆ. ಭಾರಿ ಗಾತ್ರದ ಎರಡು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ.
ಒಂದು ಮೀನು 750 ಕೆ.ಜಿ. ಹಾಗೂ ಇನ್ನೊಂದು 250 ಕೆ.ಜಿ. ತೂಗುತ್ತಿದೆ. ಮಲ್ಪೆ ಸುಭಾಸ್ ಸಾಲಿಯಾನ್ ಅವರ ಮಾಲೀಕತ್ವದ ನಾಗಸಿದ್ಧಿ ದೋಣಿಯ ಬಲೆಗೆ ಬಿದ್ದ ಈ ಮೀನುಗಳನ್ನು ಕ್ರೇನ್ ಮೂಲಕ ಇಳಿಸಲಾಯಿತು.
ತೊರಕೆ ಮೀನು ತುಂಬಾ ರುಚಿಕರವಾಗಿದ್ದು, ವಿದೇಶಗಳಿಗೆ ರಫ್ತಾಗುತ್ತದೆ. ಬೃಹತ್ ಗಾತ್ರದ ಈ ಮೀನು ಮತ್ಸ್ಯಪ್ರಿಯರ ಬಾಯಿಯಲ್ಲಿ ನೀರಿಗಿಳಿಯುವಂತೆ ಮಾಡಿದೆ. ತುಳು ಭಾಷೆಯಲ್ಲಿ ಇದನ್ನು ಕೊಂಬು ತೊರಕೆ ಎನ್ನುತ್ತಾರೆ.
ಕಳೆದ ವರ್ಷ ಮಲ್ಪೆಯಲ್ಲಿ 1.2 ಟನ್ ತೂಕದ ಭಾರಿ ಗಾತ್ರದ ಮೀನು ಬಲೆಗೆ ಬಿದ್ದಿತ್ತು. ಈ ಬಾರಿ ಸದ್ಯ ಬುಧವಾರ ಬಂದರಿಗೆ ಬಂದ ತೊರಕೆ ಮೀನು ಬೃಹತ್ ಗಾತ್ರದ್ದಾಗಿದೆ. ಹಾಗಾಗಿ ಈ ಮೀನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.