ಉಡುಪಿ: ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕಾಪು ಪೊಲೀಸರ ತಂಡ ಬಂಧಿಸಿದೆ.

ಕಕ್ಕುಂಜೆ ನಿವಾಸಿ ಮೊಹಮ್ಮದ್ ಆಲಿ (33) ಮತ್ತು ಮೂಡುಪೆರಂಪಳ್ಳಿ ನಿವಾಸಿ ಶ್ರೀಧರ (32) ಬಂಧಿತ ಆರೋಪಿಗಳು. ಇವರಿಬ್ಬರು ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೆಕ್ಸ್ ಬಳಿ ಟವೇರಾ ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವುದರ ಖಚಿತ ಮಾಹಿತಿಯಿದ್ದ ಹಿನ್ನೆಲೆ, ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಸುಮಾರು 1 ಕೆ.ಜಿ 161 ಗ್ರಾಂ ಗಾಂಜಾ, ಎರಡು ಮೊಬೈಲ್, 18,600 ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 2,24,600 ರೂಪಾಯಿಯಾಗಿದೆ. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.