ಉಡುಪಿ: ಇಂದು ಬೆಳ್ಳಂಬೆಳಗ್ಗೆ ದಿಢೀರ್ ಅಂತಾ ಎದ್ದ ಸುಂಟರಗಾಳಿಗೆ ನೀರು 200 ಮೀಟರ್ ಎತ್ತರಕ್ಕೆ ಚಿಮ್ಮಿದಂತಹ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೊಪ್ಪಳ ಮಂಚಕಲ್ಲು ಬಳಿ ನಡೆದಿದೆ.
ಈ ದೃಶ್ಯ ನೋಡಿದ ಕಾರ್ಕಳದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಸುಲೋಚನ ನಾಯಕ್ ಮನೆ ಹಾಗೂ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಮಾಲಿಂಗ ಶೆಟ್ಟಿಯವರ ಅಡಿಕೆ ತೋಟ ಹಾಗೂ ಬೃಹತ್ ಗಾತ್ರದ ಮರ ನೆಲಕಚ್ಚಿವೆ. ಕುಂಬ್ರಿ ಪದಗಳಲ್ಲಿ ಬೀಸಿದ ಸುಂಟರಗಾಳಿಗೆ ಗದ್ದೆಗಳ ನೀರು ಸುಮಾರು 200 ಮೀಟರ್ ಮೇಲಕ್ಕೆ ಎದ್ದಿದೆ.
ಈ ರೀತಿ ಸುಂಟರಗಾಳಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಸುಂಟರಗಾಳಿಯಿಂದ ಸುಮಾರು 20 ಲಕ್ಷದವರೆಗೆ ಹಾನಿ ಉಂಟಾಗಿದೆ. ಈ ಸಂದರ್ಭದಲ್ಲಿ ಕಾರ್ಕಳ ದಂಡಾಧಿಕಾರಿ ಪುರಂದರ ಹೆಗಡೆ ಹಾಗೂ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.