ಉಡುಪಿ: ಜಿಲ್ಲೆಯಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಈ ಕ್ರಮ ಅನಿವಾರ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ, ಇತ್ಯಾದಿ ಬಳಕೆ ನಿಷೇಧಿಸಲಾಗಿದೆ. ಆದೇಶ ಪಾಲಿಸದಿದ್ದಲ್ಲಿ ಸ್ಥಳೀಯ ಅಧಿಕಾರಿಗಳಿಗೆ ದಂಡ ಹಾಕಲು ಸೂಚಿಸಲಾಗಿದೆ.
ತಂಬಾಕು ಉತ್ಪನ್ನ ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಸಾಂಕ್ರಾಮಿಕ ರೋಗಗಳಾದ ಕ್ಷಯ, ನ್ಯುಮೋನಿಯ ಮತ್ತು ಕೋವಿಡ್-19 ವೈರಸ್ ಹರಡಲು ದಾರಿಯಾಗುವ ಸಾಧ್ಯತೆಯಿದೆ. ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್‌ಗಳು ಮಾನವನ ದೇಹ ಪ್ರವೇಶಿಸುತ್ತಿವೆ ಎಂದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೂ ತಂಬಾಕು ಉತ್ಪನ್ನ ಬ್ಯಾನ್ ಆಗಿದ್ದು, ಆದೇಶ ಉಲ್ಲಂಘನೆಯಾದಲ್ಲಿ ಸಾಂಕ್ರಾಮಿಕ ರೋಗಗಳ ಕಾಯಿದೆ-1897, ವಿಪತ್ತು ನಿರ್ವಹಣಾ ಕಾಯಿದೆ-2005 ಐಪಿಸಿ-188, 268, 269 ಮತ್ತು 270 ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.