ಉಡುಪಿ: ಬೆಂಗಳೂರು ಸೇರಿದಂತೆ ರಾಜ್ಯದ ಹೆಚ್ಚಿನ ಅಪಾಯವಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ನಿರ್ಧಾರ ಕೈಗೊಳ್ಳಲಾಗಿದೆ. ಈ ಪಟ್ಟಿಯಲ್ಲಿರುವ ಉಡುಪಿ ಜಿಲ್ಲಾಡಳಿತ ಕೈಗೊಂಡಿರುವ ನಿರ್ಧಾರ ಇದೀಗ ರಾಜ್ಯದ ಗಮನ ಸೆಳೆದಿದ್ದು, ಲಾಕ್ಡೌನ್ಗೆ ಬದಲಾಗಿ ಜಿಲ್ಲೆಯ ಎಲ್ಲಾ ಗಡಿ ಭಾಗಗಳನ್ನು ಸೀಲ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯ ತಜ್ಞ ಆರೋಗ್ಯಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಬುಧವಾರ ರಾತ್ರಿ 8 ಗಂಟೆಯಿಂದ 14 ದಿನಗಳ ಕಾಲ ಜಿಲ್ಲೆಯ ಗಡಿ ಅನ್ಯ ಜಿಲ್ಲೆಯ ನಿವಾಸಿಗಳಿಗೆ ಬಂದ್ ಆಗಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಗೂ ಚಿಕ್ಕಮಗಳೂರು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ಉಡುಪಿಯು, ಅನ್ಯ ಜಿಲ್ಲೆಯವರಿಗೆ ಇನ್ನು ಮುಂದೆ ಕ್ಲೋಸ್ ಆಗಿರುತ್ತದೆ. ಲಾಕ್ಡೌನ್ನಿಂದ ಕೊರೊನಾದ ಅಪಾಯವನ್ನು ಕೇವಲ ಮುಂದೂಡಬಹುದು ಅಷ್ಟೇ, ಹಾಗಾಗಿ ಲಾಕ್ಡೌನ್ಗಿಂತಲೂ ಗಡಿ ಸೀಲ್ ಹೆಚ್ಚು ಪರಿಣಾಮಕಾರಿ ಅನ್ನೋದು ಜಿಲ್ಲಾಡಳಿತದ ಅಭಿಪ್ರಾಯವಾಗಿದೆ.
ಸದ್ಯ ಉಡುಪಿ ಜಿಲ್ಲೆಗೆ ಹೊರಜಿಲ್ಲೆಗಳಿಂದ ಬರುವವರೇ ಅಪಾಯ ತಂದೊಡ್ಡುತ್ತಿದ್ದಾರೆ. ಅವರಿಂದಲೇ ಕೊರೊನಾ ಹಬ್ಬುತ್ತಿರುವುದು ದೃಢವಾಗಿದೆ. ಹೊರಗಿನವರ ಸಂಚಾರ ನಿರ್ಬಂಧಿಸಿದರೆ ಕೊರೊನಾ ನಿಯಂತ್ರಣ ಸಾಧ್ಯ ಅನ್ನೋದು ಜಿಲ್ಲಾಡಳಿತದ ಅಭಿಪ್ರಾಯ. ಹಾಗಾಗಿ ಮಾದರಿ ಎನಿಸಬಹುದಾದ ಗಡಿ ಸೀಲ್ಡೌನ್ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯೊಳಗೆ ಏನಿರುತ್ತೆ, ಏನಿರಲ್ಲ..?
- ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿರುತ್ತವೆ
- ಖಾಸಗಿ ವಾಹನ ಸಂಚಾರ ಸಹಜವಾಗಿರುತ್ತದೆ
- ಸಾರ್ವಜನಿಕ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ
- ವಾರದ ಸಂತೆ ನಡೆಸುವಂತಿಲ್ಲ
- ಧಾರ್ಮಿಕ ಕೇಂದ್ರಗಳಲ್ಲಿ ಅರ್ಚಕರು ಭಕ್ತರು ಸೇರಿದಂತೆ 20 ಜನರಿಗೆ ಮಾತ್ರ ಅವಕಾಶ
ಹೀಗೆ ಸಹಜ ಜೀವನದ ಜೊತೆಗೆ ಕೋವಿಡ್ ಎಚ್ಚರಿಕೆಯನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ದೂರದ ಮುಂಬೈನಿಂದ ಬರುವ ಪ್ರಯಾಣಿಕರನ್ನು ಕೂಡ ನಿರ್ಬಂಧಿಸಲಾಗಿದೆ. ಸೇವಾ ಸಿಂಧುವಿನಲ್ಲಿ ಹಾಕಿದ ಅರ್ಜಿಗಳನ್ನು 14 ದಿನಗಳ ಕಾಲ ಪರಿಗಣಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಐವರು ಶಾಸಕರ ಅಭಿಪ್ರಾಯವನ್ನು ಪಡೆದು ಈ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ನೋಡಿದಾಗ, ಸಂಭಾವ್ಯ ರೋಗಿಗಳನ್ನು ನಿಭಾಯಿಸುವಷ್ಟು ಬೆಡ್ ವ್ಯವಸ್ಥೆ ಜಿಲ್ಲೆಯಲ್ಲಿದೆ. ಹೊರ ಜಿಲ್ಲೆಯಿಂದಲೇ ಕೊರೊನಾ ಬರುತ್ತಿರುವಾಗ ಗಡಿ ಬಂದ್ ಆದ್ರೆ, ಜಿಲ್ಲೆಯ ಜನರ ಆರೋಗ್ಯ ಕಾಪಾಡುವುದು ಸುಲಭ ಅನ್ನೋದನ್ನು ನಿರ್ಧಾರದ ಹಿಂದಿನ ಅಧ್ಯಯನ ಹೇಳುತ್ತದೆ.