ಉಡುಪಿ: ಜ್ವರ ಮತ್ತು ಉಸಿರಾಟ ತೊಂದರೆಯಿಂದ ಹತ್ತು ತಿಂಗಳ ಮಗು ಸಾವನ್ನಪ್ಪಿದ ಘಟನೆ ಕಾರ್ಕಳದ ಮಿಯಾರು ಗ್ರಾಮದಲ್ಲಿ ನಡೆದಿದೆ.
ಮೂಲತಃ ಬಿಜಾಪುರ ಜಿಲ್ಲೆಯ ದಂಪತಿಯ ಮಗು ಇದಾಗಿದ್ದು, ಏಪ್ರಿಲ್ ತಿಂಗಳಲ್ಲಿ ಊರಿಗೆ ಹೋದ ದಂಪತಿ ಹತ್ತು ದಿನಗಳ ಹಿಂದೆ ವಾಪಾಸಾಗಿದ್ದರು.
ಈ ನಡುವೆ ಜೂನ್ .28 ರಂದು ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ತಾಲೂಕು ಆಸ್ಪತ್ರೆಗೆ ಕರೆತರುವಾಗ ಮಗು ಸಾವನ್ನಪ್ಪಿದೆ.
ಮಗುವಿನ ಗಂಟಲ ದ್ರವ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ವರದಿಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ.