ಉಡುಪಿ: ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯಾಗುತ್ತಿದೆ. ಅದೇ ಸಮಸ್ಯೆ ಈಗ ಟೆಕ್ಕಿಗಳಿಗೂ ಎದುರಾಗಿದ್ದು, ಸರಿಯಾದ ನೆಟ್‌ವರ್ಕ್‌ಗಾಗಿ 10ರಿಂದ 12 ಕಿ.ಮೀ. ದೂರದ ಪಟ್ಟಣದಲ್ಲಿ ಬಾಡಿಗೆ ರೂಂ ಮಾಡಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಕೊರೊನಾ ಲಾಕ್ಡೌನ್ ನಂತರದ ದಿನಗಳಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಐಟಿ ಉದ್ಯೋಗದಲ್ಲಿ ಇದ್ದ ಉದ್ಯೋಗಿಗಳಿಗೆ ಮನೆಯಿಂದಲೇ ಕಂಪನಿಗಳು ಕೆಲಸ ಮಾಡುವ ಅವಕಾಶ ನೀಡಿವೆ. ಇದು ಒಳ್ಳೆಯ ಉಪಾಯವೇ. ಆದರೂ ಉಡುಪಿ ಜಿಲ್ಲೆಯ ಕುಂದಾಪುರದ ಹಳ್ಳಿ ಭಾಗದ ಟೆಕ್ಕಿಗಳು ಮನೆಯಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗದೆ ಪರದಾಡುವಂತಾಗಿದೆ.
ಹೌದು, ಕುಂದಾಪುರದ ಕಮಲಶಿಲೆ, ಹಳ್ಳಿಹೊಳೆ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಐಟಿ ಉದ್ಯೋಗಿಗಳು ಇದ್ದಾರೆ. ಇವರಿಗೆ ಮನೆಯಲ್ಲಿ ಸರಿಯಾದ ನೆಟ್‌ವರ್ಕ್ ಸಿಗದೆ ಕಮಲಶಿಲೆ ಹಾಗೂ ಸಿದ್ದಾಪುರ ಪೇಟೆಗೆ ಬಂದು ಅಲ್ಲಿ ಬಾಡಿಗೆ ರೂಂ ಮಾಡಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಮನೆಯಿಂದ ಬುತ್ತಿ, ಲ್ಯಾಪ್ಟಾಪ್ ತೆಗೆದುಕೊಂಡು ಬಂದು ಸಂಜೆವರೆಗೂ ಬಾಡಿಗೆ ರೂಂನಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗುತ್ತಾರೆ. ಆದರೆ ನೈಟ್ ಶಿಫ್ಟ್ ಅಥವಾ ಮನೆಯಲ್ಲಿದ್ದಾಗ ಆನ್ಲೈನ್ ಮೀಟಿಂಗ್ ಇದ್ರೆ ಕಷ್ಟವಾಗುತ್ತದೆ ಎನ್ನುತ್ತಾರೆ ಟಿಕ್ಕಿಗಳು.
ಹಳ್ಳಿಹೊಳೆಯಲ್ಲಿ ಬಿಎಸ್ಎನ್ಎಲ್ ಹಾಗೂ ಖಾಸಗಿ ಸ್ವಾಮ್ಯದ ಟವರ್ ಇದೆ. ಆದ್ರೆ ಬಳಕೆದಾರರ ಸಮಸ್ಯೆಯಿಂದ ಅದನ್ನೂ ಕಳಚುತ್ತಿದ್ದಾರೆ. ಹೀಗಾಗಿ ಇದರಿಂದ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಕೂಡ ಟಿಕ್ಕಿಗಳಿಗೆ ಕಾಡುತ್ತಿದೆ. ಟಿಕ್ಕಿಗಳಿಗೆ ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೂ ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದು, ಆದಷ್ಟು ಬೇಗ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ.