ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ಅಧ್ಯಾತ್ಮ ಶಿಷ್ಯೆಯಾದ ತಪೋವನೀ ಮಾತಾ ಅವರ ಆತ್ಮಕಥೆ ಹರಿದ್ವಾರದಲ್ಲಿ ಬಿಡುಗಡೆ ಆಗಿದೆ.
ಮೂಲತಃ ಉಡುಪಿಯವರಾಗಿದ್ದು, ಉತ್ತರ ಭಾರತದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಮಾತಾಜಿಯವರು, ಎಳೆ ವಯಸ್ಸಲ್ಲೇ ಅಧ್ಯಾತ್ಮದ ಸೆಳೆತದಿಂದ ಪೇಜಾವರ ಶ್ರೀಗಳಲ್ಲಿ ಮಂತ್ರದೀಕ್ಷೆ ಪಡೆದವರು. ತೊಂಭತ್ತಕ್ಕೂ ಅಧಿಕ ವರ್ಷಗಳ ಸಾಧಕ ಬದುಕು ನಡೆಸಿದ ಮಾತಾಜಿಯವರ ಆತ್ಮಕಥೆಯ ಕನ್ನಡ ಅವತರಣಿಕೆ ಭಾನುವಾರ ಹರಿದ್ವಾರದಲ್ಲಿ ಲೋಕಾರ್ಪಣೆಗೊಂಡಿತು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಆಚಾರ್ಯ ಬಾಲಕೃಷ್ಣ ಅವರು ಮಾತಾಜಿಯವರ ಸಮ್ಮುಖದಲ್ಲಿ ಜಂಟಿಯಾಗಿ ಕೃತಿ ಬಿಡುಗಡೆಗೊಳಿಸಿದರು.
ಮೂಲ ಹಿಂದಿಯಲ್ಲಿರುವ ಕೃತಿಯನ್ನು ನಿವೃತ್ತ ಉಪನ್ಯಾಸಕ, ಚಿಂತಕ ಡಾ. ಜಿ ಭಾಸ್ಕರ ಮಯ್ಯರು ಅತ್ಯಂತ ಸುಂದರವಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದು, ರಾಷ್ಟ್ರೀಯ ಮಹಿಳಾ ಆಯೋಗದ ಪರವಾಗಿ ಸದಸ್ಯೆ ಶಾಮಲಾ ಕುಂದರ್ ಮಾತಾಜಿಯವರಿಗೆ ಗೌರವ ಅರ್ಪಿಸಿದರು. ಈ ಪರಿಯ ಸಾಧನೆಯ ಗುಟ್ಟೇನೆಂದು ಹಿಮಾಲಯದ ನೂರಾರು ಸಾಧು ಸಂತರು ಕೇಳಿದಾಗ, ಎಲ್ಲರಿಗೂ ಮಾತಾಜಿ ನೀಡಿದ್ದು ಒಂದೇ ಉತ್ತರ. 'ನನ್ನ ಸ್ವಾಮಿ ಉಡುಪಿ ಕೃಷ್ಣ, ನನ್ನ ಗುರು ಪೇಜಾವರ ಸ್ವಾಮೀಜಿ' ಅವರಿಂದಾಗಿ ಜೀವನದಲ್ಲಿ ನನಗೆ ಯಾವುದೇ ಭಯ ದುಃಖ ಆತಂಕ ಇಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಠದಿಂದ ಹಿಮಾಲಯ ಸೇರಿ ತಪೋವನದಲ್ಲಿ ತಪಸ್ಸಾಚರಿಸಿದ್ದ ಮಾತಾಜಿ, ಸಮುದ್ರಮಟ್ಟದಿಂದ ಸುಮಾರು 4000 ಮೀಟರ್ ಎತ್ತರದ ದುರ್ಗಮ ಸ್ಥಳದಲ್ಲಿ ಒಂಭತ್ತು ವರ್ಷಗಳ ಕಾಲ ಅತ್ಯಂತ ಭೀಕರ ಚಳಿಯಲ್ಲೂ ಏಕಾಂಗಿಯಾಗಿ ತಪಸ್ಸಾಚರಿಸಿದ್ದರು. ಹರಿದ್ವಾರದಲ್ಲೇ ಆಶ್ರಮವೊಂದನ್ನು ಸ್ಥಾಪಿಸಿ ಸಾಧು ಸಂತರು ಯಾತ್ರಿಗಳಿಗೆ ಧರ್ಮಾರ್ಥ ಊಟ-ವಸತಿ ಆರೋಗ್ಯ ಸೇವೆಗಳನ್ನು ನೀಡಿದ್ದರು. ಪ್ರಸ್ತುತ ಹರಿದ್ವಾರದ ರಾಮಕೃಷ್ಣಾಶ್ರಮ ಆಸ್ಪತ್ರೆಯಲ್ಲಿ ಪತಂಜಲಿ ಯೋಗಪೀಠದ ಆಚಾರ್ಯ ಬಾಲಕೃಷ್ಣ ಅವರ ವಿಶೇಷ ಮುತುವರ್ಜಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.