ಉಡುಪಿ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ಅನೇಕ ಭಾರತೀಯರು ಅಲ್ಲಿ ಸಿಲುಕಿದ್ದಾರೆ. ಬ್ಯಾಚ್ ಮೂಲಕ ವಿದ್ಯಾರ್ಥಿಗಳನ್ನು ವಾಪಸ್ ಕರೆ ತರಲಾಗುತ್ತಿದ್ದು, ಇನ್ನೂ ಅನೇಕರು ಅಲ್ಲಿಯೇ ಸಿಲುಕಿ ಅನ್ನ ನೀರಿಗಾಗಿ ಪರದಾಡುವಂತಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಿಡಿಯೋ ಮೂಲಕ ತಮ್ಮ ಪರಿಸ್ಥಿತಿಯನ್ನು ತಿಳಿಸಿದ್ದಾರೆ.
ನಾವು ಉಕ್ರೇನಿನ ಕಾರ್ಕೀವ್ ಸಿಟಿಯಲ್ಲಿದ್ದೇವೆ. ಇಲ್ಲಿ ನಮ್ಮ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಕಳೆದ ಎರಡು ದಿನಗಳಿಂದ ಹೊಟ್ಟೆಗೆ ಸರಿಯಾದ ಆಹಾರ ಇಲ್ಲದೇ ನಾವು ಬಳಲಿದ್ದೇವೆ. ಬ್ರೆಡ್ ಮತ್ತು ಚಾಕೊಲೇಟ್ ತಿಂದು ನಾವು ದಿನ ಕಳೆಯುತ್ತಿದ್ದೇವೆ. ನಾವು ಇರುವ ಪ್ರದೇಶದಲ್ಲಿ ಸರಿಯಾಗಿ ನೀರು ಮತ್ತು ಬೆಳಕು, ಗಾಳಿಯೂ ಇಲ್ಲ. ಮರು ಶುದ್ಧೀಕರಿಸಿದ ನಲ್ಲಿ ನೀರನ್ನೇ ಕುಡಿಯುತ್ತಿದ್ದೇವೆ ಅಂತಾ ಯುದ್ಧಭೂಮಿಯಲ್ಲಿ ಸಿಲುಕಿರುವ ಕರುನಾಡಿನ 8 ಯುವಕರು ವಿಡಿಯೋ ಮಾಡಿ ಮನವಿ ಮಾಡಿದ್ದಾರೆ.
ಭಾರತದ ರಾಯಭಾರಿ ಕಚೇರಿ ಮತ್ತು ಕೇಂದ್ರ ಸರ್ಕಾರ ನಮ್ಮನ್ನು ರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಕೂಡಲೇ ನಮ್ಮನ್ನು ರಕ್ಷಣೆ ಮಾಡದಿದ್ದರೆ ಇಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಕಾಲೇಜಿನಲ್ಲಿದ್ದಾಗ ಅಲರಾಮ್ ಸದ್ದು ನಮ್ಮನ್ನು ಎಬ್ಬಿಸುತ್ತಿತ್ತು. ಈಗ ಬಾಂಬ್ ದಾಳಿ ಸದ್ದಿನಿಂದ ನಾವು ನಿದ್ದೆ ಕಳೆದುಕೊಂಡಿದ್ದೇವೆ. ಬಾಂಬ್ ದಾಳಿಯ ಕಂಪನಕ್ಕೆ ಎಲ್ಲಿ ನಮ್ಮ ಕಟ್ಟಡ ಕುಸಿದು ಬಿಡುವುದೋ ಎಂದು ಭಯವಾಗುತ್ತಿದೆ. ಪೋಲ್ಯಾಂಡ್ ಮತ್ತು ರೊಮೇನಿಯಾ ದೇಶದ ಗಡಿಗೆ ಬರುವಂತೆ ಹೇಳಿದ್ದಾರೆ. ಆದರೆ ಇಲ್ಲಿ ಬಂಕರ್ನಿಂದ ಹೊರ ಬರುವ ಸ್ಥಿತಿ ಇಲ್ಲ.
ಇದನ್ನೂ ಓದಿ: ಉಕ್ರೇನ್ನಿಂದ ಬೆಂಗಳೂರಿಗೆ ಆಗಮಿಸಿದ ಐವರು ವಿದ್ಯಾರ್ಥಿಗಳು.. ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಸ್ಟುಡೆಂಟ್ಸ್
ಅಲ್ಲದೇ ಪೋಲ್ಯಾಂಡ್ ಮತ್ತು ರೊಮೇನಿಯಾ ಇಲ್ಲಿಂದ ಸಾವಿರದ ಐನೂರು ಕಿಲೋಮೀಟರ್ ದೂರದಲ್ಲಿದೆ. ನಾವು ಬೆಲ್ ಗಾರ್ಡ್ ವಿಮಾನ ನಿಲ್ದಾಣದಿಂದ 80 ಕಿಲೋ ಮೀಟರ್ ದೂರದಲ್ಲಿ ಇದ್ದೇವೆ. ಬೆಲ್ ಗಾರ್ಡ್ ಏರ್ಪೋರ್ಟ್ ಈಗ ರಷ್ಯಾದ ವಶವಾಗಿದೆ. ಹಾಗಾಗಿ ರಷ್ಯಾ ಸರ್ಕಾರದ ಜೊತೆ ಮಾತನಾಡಿ ನಮ್ಮನ್ನು ರಕ್ಷಿಸಿ. ಬೆಲ್ ಗಾರ್ಡ್ ಏರ್ಪೋರ್ಟ್ ಮೂಲಕ ನಮ್ಮನ್ನು ರಕ್ಷಣೆ ಮಾಡಿ ಎಂದು ಯುವಕರು ಮನವಿ ಮಾಡಿದ್ದಾರೆ.