ಉಡುಪಿ: ಬೈಂದೂರು ತಾಲೂಕಿನಲ್ಲಿ ವಿಶೇಷಚೇತನ ವಿದ್ಯಾರ್ಥಿನಿಯೊಬ್ಬರು ಪ್ರತಿಭಾ ಕಾರಂಜಿಯಲ್ಲಿ ತಾಯಿಯ ಮಡಿಲಲ್ಲೇ ಭಾಷಣ ಮಾಡಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.
ದೈಹಿಕ ಸ್ವಾಧೀನ ಕಳಕೊಂಡ ಶ್ರೀರಕ್ಷಾ ಎಂಬಾ ವಿದ್ಯಾರ್ಥಿನಿಯ ಸಾಧನೆಗೆ ಯಾವುದೂ ಅಡ್ಡಿಯಾಗಿಲ್ಲ. ತಾಯಿಯ ಮಡಿಲಲ್ಲಿ ಕೂತು ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದು ಗಮನ ಸೆಳೆದಿದ್ದಾರೆ.
ಶ್ರೀಧರ್ ಹಾಗೂ ಗೀತಾ ದಂಪತಿಯ ಪುತ್ರಿಯಾದ ಶ್ರೀರಕ್ಷಾ ನಾಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ಓದುತ್ತಿದ್ದಾರೆ. ಶ್ರೀರಕ್ಷಾ ಹುಟ್ಟುವಾಗಲೇ ಎರಡು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಆದರೆ, ಕಲಿಕೆಯಲ್ಲಿ ಮಾತ್ರ ಅಪಾರ ಆಸಕ್ತಿ. ಇಡೀ ತರಗತಿಗೆ ಶ್ರೀರಕ್ಷನೇ ಮೊದಲ ಸ್ಥಾನ.
ಇದನ್ನು ಗಮನಿಸಿದ ಕಡಿಕೆ ನಾಡಾದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ ವಿದ್ಯಾರ್ಥಿನಿ ರಕ್ಷಾಗೆ ಮಾನಸಿಕ ಸ್ಥೈರ್ಯ ತುಂಬಿಸಿದೆ. ದಿನವೂ ರಿಕ್ಷಾದಲ್ಲಿ ಶಾಲೆಗೆ ಕರೆತರುವ ವ್ಯವಸ್ಥೆ ಮಾಡಿದ್ದಾರೆ. ಸಹಪಾಠಿಗಳೇ ಶಾಲೆಯಲ್ಲಿ ರಕ್ಷಾಗೆ ನೆರವಾಗುತ್ತಾರೆ . ಕ್ವಿಜ್, ಭಾಷಣ, ಹಾಡು.. ಹೀಗೆ ಶ್ರೀರಕ್ಷಾ ಎಲ್ಲದರಲ್ಲೂ ಮುಂದೆ ಇದ್ದಾರೆ.
ಬದುಕಿನ ಸವಾಲನ್ನು ಎದುರಿಸಿ ಶ್ರೀರಕ್ಷಾ ಪ್ರತಿಭಾ ಕಾರಂಜಿಯಲ್ಲಿ ಮಾಡಿದ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರು ಹೆಮ್ಮ ಪಟ್ಟಿದ್ದಾರೆ. ಅಲ್ಲದೇ, ಜಿಲ್ಲಾ ಮಟ್ಟಕ್ಕೆ ಶ್ರೀರಕ್ಷಾ ಆಯ್ಕೆ ಆಗಿರುವುದು ಪ್ರತಿಯೊಬ್ಬರಿಗೂ ಮಾದರಿ ಹಾಗೂ ಸ್ಫೂರ್ತಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನಷ್ಟು ಅವಕಾಶಗಳು ಅರಸಿ ಬರಲಿ. ಇತರ ಬಾಳಿಗೆ ಶ್ರೀರಕ್ಷಾ ಸ್ಫೂರ್ತಿಯಾಗುವ ಹಾಗೆ ಬದುಕಲಿ ಎನ್ನುವುದೇ ನಮ್ಮ ಆಶಯ ಎಂದು ಶಾಲಾ ಮುಖ್ಯೋಪಧ್ಯಾಯರು ಹೇಳಿದ್ದಾರೆ.
ಇದನ್ನೂ ಓದಿ: ಅಂಗವೈಕಲ್ಯ ಮೀರಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಎಂಡೋಪೀಡಿತ ಯುವಕ!