ಉಡುಪಿ: ಜಿಲ್ಲೆಯ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ಅವರ ಬಾವಿಗೆ ಬೃಹತ್ ಗಾತ್ರದ ಬಿಳಿನಾಗರ ಹಾವು ಬಿದ್ದಿದ್ದರಿಂದ ಕೆಲಕಾಲ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.
ಬಾವಿ ಮೇಲಿನಿಂದ ನೋಡಿದ್ರೆ, ಆ ಹಾವು ಮೇಲೆ ಬರಲು ಹೆಣಗಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಮೊದಲೇ ಕರಾವಳಿ ಭಾಗದ ಜನರಿಗೆ ನಾಗರ ಹಾವನ್ನು ಕಂಡರೆ ಭಯ ಮತ್ತು ಭಕ್ತಿ. ಹಾಗಾಗಿ, ಹೇಗಾದರೂ ಮಾಡಿ ಈ ಹಾವನ್ನು ರಕ್ಷಿಸಲೇಬೇಕೆಂದು ಪಣ ತೊಟ್ಟ ಮನೆಯವರು ನಂತರ ಸಾಲಿಗ್ರಾಮದ ಉರಗ ತಜ್ಞ ಸುಧೀಂದ್ರ ಐತಾಳರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಮಳೆ ನಿರಂತರವಾಗಿ ಬರುತ್ತಿದ್ದುದರಿಂದ ಬಾವಿಗಿಳಿದು ಕಾರ್ಯಾಚರಣೆ ನಡೆಸೋದು ಸಾಧ್ಯವಿರಲಿಲ್ಲ. ಆದ್ದರಿಂದ ಉಪಾಯಹೂಡಿ ಟಯರ್ವೊಂದನ್ನು ಎರಡು ಹಗ್ಗದ ಸಹಾಯದಿಂದ ಬಾವಿಗೆ ಇಳಿಸಲಾಯ್ತು. ಟಯರ್ ಮೂಲಕ ಹಾವನ್ನು ಮೇಲಕ್ಕೆತ್ತಿ, ನಂತರ ನಾಜೂಕಾಗಿ ಪೈಪ್ನೊಳಗೆ ಬರುವಂತೆ ಮಾಡಿ ಸುರಕ್ಷಿತವಾಗಿ ರಕ್ಷಿಸಲಾಯ್ತು.
ಮೇಲಕ್ಕೆ ಬರುವ ತನಕವೂ ಬುಸುಗುಟ್ಟುತ್ತಲೇ ಇದ್ದ ಹಾವು, ನಂತರ ಪೈಪಿನೊಳಗೆ ಸೇರಿದ್ದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸುರಿವ ಮಳೆಯನ್ನೂ ಲೆಕ್ಕಿಸದೇ ಬುಸುಗುಟ್ಟುತ್ತಿದ್ದ ಹಾವಿನ ರಕ್ಷಣೆ ಮಾಡಿದ ಸಾಲಿಗ್ರಾಮ ಉರಗ ತಜ್ಞ ಸುಧೀಂದ್ರ ಐತಾಳ್ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆಗೆ 2023ರವರೆಗೂ ಕಾಯಬೇಕು : ಸತೀಶ್ ಜಾರಕಿಹೊಳಿ