ಉಡುಪಿ: ಕರಾವಳಿ ಭಾಗದಲ್ಲಿ ರವಿ ಕಟಪಾಡಿ ಹೆಸರು ಚಿರಪರಿಚಿತ. ಇವರು ಅಷ್ಟಮಿ ಮತ್ತು ವಿಟ್ಲಪಿಂಡಿ ದಿನದಂದು ವೇಷ ಧರಿಸಿ ಜಿಲ್ಲೆಯ ಸುತ್ತಮುತ್ತಲಿನ ಊರೂರು ತಿರುಗಿ ಹಣ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ದೇಣಿಗೆಯನ್ನು ನಿನ್ನೆ 8 ಜನ ಬಡ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಕಟಪಾಡಿ ನಿವಾಸಿಯಾಗಿರುವ ರವಿ, ಕಳೆದ 7 ವರ್ಷಗಳಿಂದ ವೇಷ ಧರಿಸುತ್ತಿದ್ದಾರೆ. ಊರೂರು ತಿರುಗಿ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನಾದ ಇವರು, ಸಂಗ್ರಹವಾದ ಹಣವನ್ನು ತಾನು ಇಟ್ಟುಕೊಳ್ಳದೇ ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗಾಗಿ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಸಂಗ್ರಹಿಸಿದ ಏಳು 7,17,350 ರೂಪಾಯಿಯನ್ನು 8 ಜನ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿತರಿಸಿದ್ದಾರೆ.
ರವಿ ಕಟಪಾಡಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು, ಆರ್ಥಿಕವಾಗಿ ಅಷ್ಟೊಂದು ಸದೃಢರಲ್ಲ. ಆದರೂ ಸಂಗ್ರಹವಾದ ಹಣದಲ್ಲಿ ಒಂದು ರೂಪಾಯಿಯನ್ನು ತಾನು ಇಟ್ಟುಕೊಳ್ಳದೆ ಬಡ ಮಕ್ಕಳಿಗೆ ನೀಡಿದ್ದಾರೆ. ಇದುವರೆಗೂ ಏಳು ವರ್ಷದಲ್ಲಿ 79 ಲಕ್ಷ ದೇಣಿಗೆ ಸಂಗ್ರಹವಾಗಿದ್ದು, ವೇಷ, ತಿರುಗಾಟದ ಖರ್ಚನ್ನು ತಮ್ಮ ತಂಡದವರೇ ಭರಿಸುತ್ತಿರುವುದು ವಿಶೇಷ.
ಇದನ್ನೂ ಓದಿ: ಕಲಿಯುಗ ಕರ್ಣ ರವಿ ಕಟಪಾಡಿ: ಹಾಲಿವುಡ್ ವೇಷ ಧರಿಸಿ ಮಿಂಚಿದ ಕೂಲಿ ಕಾರ್ಮಿಕ
ಅಂದಹಾಗೆ, ರವಿ ಅವರ ಮಾನವೀಯ ಕಾಳಜಿ ಗಮನಿಸಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿ ಕೊಡುವ 'ಕರೋಡ್ ಪತಿ' ಶೋನಲ್ಲಿ ಕೂಡ ಅವಕಾಶ ನೀಡಲಾಗಿತ್ತು. ಅದರಲ್ಲಿ ಬಂದ 7 ಲಕ್ಷ ರೂಪಾಯಿಯನ್ನು ಕಷ್ಟದಲ್ಲಿರುವವರಿಗೆ ಕೊಟ್ಟು ರವಿ ಉದಾರತೆ ಮೆರೆದಿದ್ದರು.