ಉಡುಪಿ: ಕೇಂದ್ರ ಸರ್ಕಾರ ಕೊಡಮಾಡುವ ಬಿಲಿಯನೇರ್ ರೈತ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಉದ್ಯಮಿ ರಮೇಶ್ ನಾಯಕ್ ಅವರು ಆಯ್ಕೆಯಾಗಿದ್ದಾರೆ. ರೈಸ್‌ಮಿಲ್ ಉದ್ಯಮದ ಜತೆಗೆ ಕೃಷಿಯಲ್ಲಿ ಸಾಧನೆ ಮಾಡಿರುವ ತೆಕ್ಕಟ್ಟೆಯ ರೈಸ್‌ಮಿಲ್ ಉದ್ಯಮಿ ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಸುಮಾರು 11 ಜಾತಿಯ, 1,634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ಬೆಳೆದು ಉತ್ತಮ ಫಸಲು ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ರಮೇಶ್ ನಾಯಕ್ ವಾರ್ಷಿಕ ಸುಮಾರು ಕೋಟಿ ರೂ.ಗಳಿಗೂ ಅಧಿಕ ವಹಿವಾಟು ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ದೆಹಲಿಯಲ್ಲಿ ಡಿಸೆಂಬರ್ 7ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆಗೆ ಮಾತನಾಡಿದ ರಮೇಶ್ ನಾಯಕ್, "ಪ್ರಶಸ್ತಿ ಸ್ವೀಕರಿಸಲು ಮಂಗಳವಾರ ದೆಹಲಿಗೆ ಹೊರಡುತ್ತಿದ್ದೇನೆ. ನಾವು ಮೂಲತಃ ಕೃಷಿಕರು. 1968ರಲ್ಲಿ ನಮ್ಮ ತಂದೆ ಅವರು ರೈಸ್‌ಮಿಲ್ ಆರಂಭಿಸಿದ್ದರು. 1979 ರಿಂದ ನಾನು ಅವರೊಂದಿಗೆ ಕೈ ಜೋಡಿಸಿದೆ. ಕೃಷಿಗೆ ಸಂಬಂಧಿಸಿದಂತೆ ಫ್ರೊಟ್ ಇಂಡಸ್ಟ್ರಿ ಮಾಡಿದ್ದೇವೆ. ಇದರಿಂದ 10 ಕೋಟಿ ರೂಪಾಯಿ ವ್ಯವಹಾರ ಜಾಸ್ತಿ ಇದೆ. 13 ಎಕರೆಯಲ್ಲಿ ಮಾದರಿ ಕೃಷಿ ಮಾಡಿದ್ದೇವೆ. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಜಿಕೆವಿಕೆ ಯವರು ಬಿಲಿಯನೇರ್ ರೈತ ಪ್ರಶಸ್ತಿಗೆ ಶಿಫಾರಸು ಮಾಡಿದರು. ಕೃಷಿಯಲ್ಲಿ ಕೆಲವರು ನಷ್ಟ ಅನುಭವಿಸುತ್ತಾರೆ. ಆದರೆ ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಲಾಭವಾಗಲಿದೆ. ಅದರ ಬಗ್ಗೆ ಅಧ್ಯಯನ ಮಾಡಬೇಕಿದೆ" ಎಂದು ಹೇಳಿದರು.
ಇದನ್ನೂ ಓದಿ: ಪರಿಸರ ಇಲಾಖೆ ಅನುಮತಿ ಸಿಕ್ಕ ತಕ್ಷಣವೇ ಮಹದಾಯಿ, ಮೇಕೆದಾಟು ಕಾಮಗಾರಿ ಆರಂಭ: ಸಚಿವ ಮಹದೇವಪ್ಪ