ಉಡುಪಿ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಉಡುಪಿ ಭೇಟಿಯ ವೇಳೆ ಅಚ್ಚರಿಯ ಘಟನೆ ಒಂದು ನಡೆಯಿತು. ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಸಂವಾದ ನಡೆಸಿದ ರಾಹುಲ್ ಗಾಂಧಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ದೊಡ್ಡ ಗಾತ್ರದ ಅಂಜಲ್ ಮೀನೊಂದನ್ನು ಗಿಫ್ಟಾಗಿ ಕೊಟ್ಟಿತು. ಈ ಮೀನನ್ನು ಎತ್ತಿ ಖುಷಿ ಪಟ್ಟ ರಾಹುಲ್ ಮೀನುಗಾರ ಮಹಿಳೆಯ ಜೊತೆ ಆತ್ಮೀಯವಾಗಿ ನಿಂತು ಫೋಟೋಗೆ ಪೋಸ್ ಕೊಟ್ಟರು.
ಇದಾಗಿ ನೇರಾ ಮಹಾಲಕ್ಷ್ಮಿ ದೇಗುಲಕ್ಕೆ ರಾಹುಲ್ ಗಾಂಧಿಯನ್ನು ಕರೆತರಲಾಯ್ತು. ಮೀನನ್ನು ಕೈಯಲ್ಲಿ ಹಿಡಿದಿದ್ದ ರಾಹುಲ್ ನಾನಿನ್ನು ಕೈ ತೊಳೆದಿಲ್ಲ ದೇವಸ್ಥಾನದ ಒಳಗೆ ಬರಬಹುದೇ ಎಂದು ಮುಗ್ಧವಾಗಿ ಪ್ರಶ್ನೆ ಮಾಡಿದ್ದಾರೆ. ಸುತ್ತಮುತ್ತ ಇದ್ದ ಕಾಂಗ್ರೆಸ್ ನಾಯಕರು ಮೊಗವೀರ ಮುಖಂಡರು ಯಾವುದೇ ಅಭ್ಯಂತರ ಇಲ್ಲ ತಾವು ಒಳಗೆ ಬನ್ನಿ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ದಾಸರಹಳ್ಳಿ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ..!
ಆದರೂ ರಾಹುಲ್ ಗಾಂಧಿ ಹೊಸ್ತಿಲ ಹೊರಗೆ ನಿಂತು ಆಲೋಚನೆ ಮಾಡಿದ್ದಾರೆ ನಂತರ ಜೊತೆಗಿದ್ದವರು ದೇಗುಲದ ಒಳಗೆ ಕರೆದುಕೊಂಡು ಹೋಗಿದ್ದಾರೆ. ವಿಶೇಷ ಪೂಜೆ ಸಲ್ಲಿಕೆ ಮಾಡಿದ ಅರ್ಚಕರು ರಾಹುಲ್ ಗಾಂಧಿ ಅವರಿಗೆ ಆಯುಷ್ಯ ಆರೋಗ್ಯ ಭಾಗ್ಯ ಕರುಣಿಸಲಿ. ಸತ್ಯ ನ್ಯಾಯ ನೀತಿ ಧರ್ಮದ ಮೂಲಕ ದೇಶ ರಕ್ಷಣೆ ಮಾಡುವ ಶಕ್ತಿ ಸಾಮರ್ಥ್ಯ ನಿಮ್ಮಲ್ಲಿ ಇದೆ. ಭಾರತ ಜೋಡೋ ಎಂಬ ದೊಡ್ಡ ಕಾರ್ಯಕ್ರಮವನ್ನು ತಾವು ಮಾಡಿದ್ದೀರಿ ಎಂದು ಅರ್ಚಕರು ದೇವರ ಮುಂದೆ ಪ್ರಾರ್ಥಿಸಿ, ಪ್ರಸಾದವನ್ನು ನೀಡಿದ್ದಾರೆ.
ಮೀನುಗಾರರಿಗೆ 10 ಲಕ್ಷ ರೂ ವಿಮೆ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರಕ್ಕಾಗಿ ಉಡುಪಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಈ ಭರವಸೆಯನ್ನು ಮೀನುಗಾರರಿಗೆ ತಮ್ಮ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಕೊಡುವುದಾಗಿ ನಿಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೀನುಗಾರರಿಗೆ 10 ಲಕ್ಷ ರೂಪಾಯಿ ವಿಮೆ, ಮೀನುಗಾರರಿಗೆ ಒಂದು ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ ದಿನಕ್ಕೆ ಗರಿಷ್ಠ 500 ಲೀಟರ್‌ವರೆಗೆ 25 ರೂಪಾಯಿ ಸಬ್ಸಿಡಿ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಇನ್ನು ರಾಹುಲ್ ಗಾಂಧಿ ಉಡುಪಿ ಜಲ್ಲೆಯ ಕಾಪುವಿನಲ್ಲಿ ಮೀನುಗಾರ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದ್ದಾರೆ. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ಮೀನುಗಾರಿಕೆಗೆ ತೊಂದರೆಯಾಗುತ್ತಿದೆ. ಬ್ಯಾಂಕ್ ಸಾಲ ಪಡೆಯುವುದು ಕಷ್ಟವಾಗಿದೆ. ಹೀಗಾಗಿ ನಾವು ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ನಿಮಗೆ ಸ್ವಲ್ಪ ಸಹಾಯ ನೀಡಲು ಬಯಸುತ್ತೇವೆ ಎಂಬ ಆಶ್ವಾಸನೆಯನ್ನೂ ಕೂಡ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಪಬ್ಬಾಸ್ನಲ್ಲಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ - ವಿಡಿಯೋ
ಇದನ್ನೂ ಓದಿ: ಮೀನುಗಾರರಿಗೆ ದೊರೆಯಲಿದೆ 10 ಲಕ್ಷ ರೂ. ವಿಮೆ, ಲೀಟರ್ ಡೀಸೆಲ್‌ಗೆ 25 ರೂ. ಸಬ್ಸಿಡಿ: ರಾಹುಲ್ ಗಾಂಧಿ ಭರವಸೆ