ಉಡುಪಿ: ''ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಮೀನುಗಾರರಿಗೆ 10 ಲಕ್ಷ ರೂಪಾಯಿ ವಿಮೆ, ಮೀನುಗಾರರಿಗೆ ಒಂದು ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ ದಿನಕ್ಕೆ ಗರಿಷ್ಠ 500 ಲೀಟರ್‌ವರೆಗೆ 25 ರೂಪಾಯಿ ಸಬ್ಸಿಡಿ ನೀಡವುದು'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಭರವಸೆ ನೀಡಿದರು. ಜಿಲ್ಲೆಯ ಕಾಪುವಿನಲ್ಲಿ ಮೀನುಗಾರ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ''ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಬ್ಯಾಂಕ್ ಸಾಲ ಪಡೆಯುವುದು ಕಷ್ಟಕರವಾಗಿದೆ'' ಎಂದು ಆರೋಪಿಸಿದರು.
ಮೀನಗಾರರಿಗೆ ಭರವಸೆ ನೀಡಿದ ರಾಹುಲ್ ಗಾಂಧಿ: ''ಮೀನಿನ ಜನಸಂಖ್ಯೆಯು ಕಡಿಮೆಯಾಗುತ್ತಿದೆ. ಕಾರ್ಯಾಚರಣೆಯ ವೆಚ್ಚವು ಹೆಚ್ಚುತ್ತಿದ್ದು, ಪರಿಣಾಮವಾಗಿ ಮೀನಿನ ಬೆಲೆಯಲ್ಲಿ ಹೆಚ್ಚಳವಾಗಿದೆ. ಅದಕ್ಕಾಗಿಯೇ ನಾವು ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ನಿಮಗೆ ಸ್ವಲ್ಪ ಪರಿಹಾರವನ್ನು ನೀಡಲು ಬಯಸುತ್ತೇವೆ'' ಎಂದು ರಾಹುಲ್ ಗಾಂಧಿ ಹೇಳಿದರು. ''ನಾವು ನಿಮಗಾಗಿ ಮೂರು ಕೆಲಸಗಳನ್ನು ಮಾಡುತ್ತೇವೆ. ಮೀನುಗಾರರಿಗೆ ರೂ.10 ಲಕ್ಷ ವಿಮೆ ರಕ್ಷಣೆ, ಮೀನುಗಾರ ಮಹಿಳೆಯರಿಗೆ ರೂ. ಒಂದು ಲಕ್ಷ ಬಡ್ಡಿ ರಹಿತ ಸಾಲ ಮತ್ತು ದಿನಕ್ಕೆ 500 ಲೀಟರ್ ಡೀಸೆಲ್ ವರೆಗೆ ಲೀಟರ್ ಡೀಸೆಲ್‌ಗೆ ರೂ. 25 ಸಬ್ಸಿಡಿ'' ಎಂದು ಹೇಳಿದರು.
ಈಗಾಗಲೇ ನಾಲ್ಕು ಪ್ರಮುಖ 'ಖಾತರಿ'ಗಳ ಘೋಷಣೆ: ''ಮುಂದಿನ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ಎಲ್ಲ ಆಶ್ವಾಸನೆಗಳನ್ನು ಜಾರಿಗೆ ತರಲಾಗುವುದು. ಕಾಂಗ್ರೆಸ್ ಕೇವಲ ಭರವಸೆಗಳನ್ನು ನೀಡುವುದಿಲ್ಲ. ಮೊದಲ ದಿನದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಕರ್ನಾಟಕ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಈಗಾಗಲೇ ನಾಲ್ಕು ಪ್ರಮುಖ 'ಖಾತರಿ'ಗಳನ್ನು ಘೋಷಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ), ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2,000 ರೂ. (ಗೃಹ ಲಕ್ಷ್ಮಿ), 10 ಕೆಜಿ ಅಕ್ಕಿ ಉಚಿತ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ (ಅನ್ನ ಭಾಗ್ಯ), ಮತ್ತು ಪದವೀಧರ ಯುವಕರಿಗೆ ಪ್ರತಿ ತಿಂಗಳು ರೂ. 3,000 ಮತ್ತು ಡಿಪ್ಲೊಮಾ ಹೊಂದಿರುವವರಿಗೆ (18ರಿಂದ 25 ವರ್ಷದೊಳಗಿನವರು) ಎರಡು ವರ್ಷಗಳವರೆಗೆ (ಯುವನಿಧಿ) ರೂ. 1,500 ನೀಡಲಾಗುವುದು ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನ 2,500 ಕೋಟಿಗೆ ಮಾರಾಟಕ್ಕೆ- ರಾಹುಲ್ ಗಾಂಧಿ ''ಮುಂಬರುವ ಚುನಾವಣೆಗಳು ಎರಡು ಸಿದ್ಧಾಂತಗಳ ನಡುವಿನ ಹೋರಾಟ ಎಂದು ಹೇಳಿದ ಗಾಂಧಿ, ಕಾಂಗ್ರೆಸ್ ಬಡವರು ಮತ್ತು ದೀನ ದಲಿತರಿಗಾಗಿ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಈಗಿರುವ ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾದ ಸರ್ಕಾರವಲ್ಲ, ಕೋಟ್ಯಂತರ ರೂ.ಗಳಿಂದ ಶಾಸಕರನ್ನು ಖರೀದಿಸಿ, ಸರ್ಕಾರ ಅಧಿಕಾರಿಕ್ಕೆ ಬಂದಿದೆ. ಇದು ಕರ್ನಾಟಕದ ಎಲ್ಲರಿಗೂ ತಿಳಿದಿರುವ ಸತ್ಯ. ಬಿಜೆಪಿ ಶಾಸಕರು ಹೇಳುವ ಪ್ರಕಾರ, ಮುಖ್ಯಮಂತ್ರಿ ಸ್ಥಾನ 2,500 ಕೋಟಿಗೆ ಮಾರಾಟಕ್ಕೆ ಇಡಲಾಗಿದೆ'' ಎಂದು ಅವರು ಹೇಳಿದರು.
''ಬಿಜೆಪಿ ಸರ್ಕಾರ ಯಾವುದೇ ಕಾಮಗಾರಿ ಅನುಷ್ಠಾನಕ್ಕೆ ಶೇ.40ರಷ್ಟು ಕಮಿಷನ್ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘ ದೂರು ನೀಡಿದ್ದು, ಈಗಿನ ಸರ್ಕಾರದ ಭ್ರಷ್ಟಾಚಾರ ಜನರಿಗೆ ಅರಿವಾಗಿದೆ. ಶಿಕ್ಷಕರು, ಪೊಲೀಸ್ ಇನಸ್ಪೆಕ್ಟರ್‌ಗಳು ಮತ್ತು ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ಭ್ರಷ್ಟ ವ್ಯವಹಾರಗಳು ನಡೆದಿವೆ. ಆಡಳಿತ ಪಕ್ಷವು ಖರ್ಚು ಮಾಡುವ ಹಣವನ್ನು ಜನರಿಂದ ಸಂಗ್ರಹಿಸುತ್ತಿದೆ'' ಎಂದು ರಾಹುಲ್ ಗಾಂಧಿ ಆರೋಪಿಸಿದರು.
''ನಿಮ್ಮ ಹಣದ ಫಲಾನುಭವಿಗಳು ಯಾರು? ಅವರು ಅದನ್ನು ಆರೋಗ್ಯ ಅಥವಾ ಶಿಕ್ಷಣ ಕ್ಷೇತ್ರಗಳಿಗೆ ಖರ್ಚು ಮಾಡುತ್ತಿಲ್ಲ. ಆದರೆ, ಅವರ ಕೆಲವು ಮಿಲಿಯನೇರ್ ಸ್ನೇಹಿತರಿಗಾಗಿ ಖರ್ಚು ಮಾಡುತ್ತಿದ್ದಾರೆ ಎಂದ ಅವರು, ಸಾರ್ವಜನಿಕ ಹಣ ಜನರಿಗೆ ತಲುಪುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ: ಮೋದಿ ಸಾವು ಬಯಸುತ್ತಿರುವ ಕಾಂಗ್ರೆಸ್ ನಿರ್ಲಜ್ಜ ಪಕ್ಷ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಗರಂ