ಉಡುಪಿ: ಉಪ್ಪೂರಿನಲ್ಲಿ ನಿರ್ಮಾಣವಾದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಶೋಭಾ ಕರಂದ್ಲಾಜೆ ಅವರ ಶ್ರಮದಿಂದ ನಿರ್ಮಾಣವಾಗಿದೆ ಎಂಬ ಶಾಸಕ ರಘುಪತಿ ಭಟ್ ಅವರ ಟ್ವೀಟ್ ಹೇಳಿಕೆ, ಸಂಪೂರ್ಣ ನಿರಾಧಾರ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿರುವ ಪ್ರಮೋದ್ ಮಧ್ವರಾಜ್, ಉಪ್ಪೂರಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ನಾನು ಶಾಸಕನಿರುವ ಸಂದರ್ಭದಲ್ಲಿ ಸಚಿವರು ಮತ್ತು ಇಲಾಖಾ ಮುಖ್ಯಸ್ಥರ ಮೇಲೆ ಒತ್ತಡ ತಂದು ಮಂಜೂರು ಮಾಡಿದ್ದೆ. ಈ ಕೇಂದ್ರ ಸ್ಥಾಪನೆಗೆ10 ಎಕರೆ ಜಮೀನು ಮಂಜೂರು ಮಾಡಿ, ಕೇಂದ್ರ ಸ್ಥಾಪನೆಯಾಗಿದೆ. ಈಗ ಶಾಸಕ ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ ಅವರ ಮುತುವರ್ಜಿಯಿಂದ ಈ ಕೇಂದ್ರ ಸ್ಥಾಪನೆಯಾಗಿದೆ ಅಂತ ಹಸಿ ಸುಳ್ಳು ಹೇಳುತ್ತಿದ್ದಾರೆ.
ಸುಮಾರು 48 ಕೋಟಿ ವೆಚ್ಚದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದ್ದು,ಈ ಯೋಜನೆಗೆ ನಬಾರ್ಡ್ ಆರ್ಐಡಿಎಫ್ ಯೋಜನೆಯಡಿ ಹಣ ಮಂಜೂರಾಗಿದೆ. ಈ ಯೋಜನೆಯಲ್ಲಿ ಸಂಸದೆಯ ಪಾತ್ರ ಶೂನ್ಯ ಎಂದು ಆಪಾದಿಸಿದರು.