ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿಗಿಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಟವೇ ಜಾಸ್ತಿಯಾಗಿದೆ. ಹಾಗಾಗಿ ಶಿವಕುಮಾರ್ ಅವರು ಮೊದಲು ಸಿದ್ದರಾಮಯ್ಯನವರ ಕಾಟದಿಂದ ತಪ್ಪಿಸಿಕೊಂಡು ಹೊರಬರಲಿ. ಆಮೇಲೆ ನಮ್ಮ ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡಲಿ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದರು.
ಜಿಲ್ಲೆಯ ಮಳೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ಪಕ್ಷ ಇದೆಯೋ ಇಲ್ಲವೋ ಗೊತ್ತಿಲ್ಲ. ಸಿದ್ದರಾಮಯ್ಯನವರು ಈಗ ಕೊರೊನಾದಿಂದ ಆಸ್ಪತ್ರೆಯಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಇನ್ನೂ ಕೂಡ ಪದಗ್ರಹಣ, ಸನ್ಮಾನದ ಗುಂಗಿನಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಇನ್ನು ಫೀಲ್ಡಿಗೇ ಇಳಿದಿಲ್ಲ. ನಮ್ಮ ಮುಖ್ಯಮಂತ್ರಿಗಳು ಅಷ್ಟು ವಯಸ್ಸಾದರೂ ಕ್ರಿಯಾಶೀಲರಾಗಿದ್ದಾರೆ. ಪ್ರತಿಪಕ್ಷದವರು ಕಾಮಾಲೆ ಕಣ್ಣಿಂದ ನೋಡಿದರೆ ನಮ್ಮ ಕೆಲಸ ಕಾಣಲ್ಲ. ಸರ್ಕಾರ ಎಲ್ಲದಕ್ಕೂ ಉತ್ತರ ಕೊಡಲು ತಯಾರಿದೆ ಎಂದರು.
ಮಳೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ:
ಜಿಲ್ಲೆಯ ಮಳೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಕೊಡಗು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಸ್ಥಿತಿ ಇದೆ. ಮಳೆ ಮತ್ತು ನೆರೆಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೊಡಗಿನಲ್ಲಿ ಅರ್ಚಕರು ಮನೆ ಖಾಲಿ ಮಾಡಿದ ಕಾರಣ ಸಮಸ್ಯೆಯಾಗಿದೆ. ಕೊಡಗಿಗೂ ನಾನು ಭೇಟೆ ಮಾಡುತ್ತೇನೆ. ಈಗ ಉಡುಪಿ, ಮಂಗಳೂರು, ಕಾರವಾರ ಪ್ರವಾಸದಲ್ಲಿದ್ದೇನೆ. ಅಧಿಕಾರಿಗಳನ್ನು ಅಲರ್ಟ್ ಮಾಡಲು ಈ ಪ್ರವಾಸ ಕೈಗೊಂಡಿದ್ದೇನೆ ಎಂದರು.
ಇನ್ನು ಉಡುಪಿ ಜಿಲ್ಲೆಯ ಮಳೆ ಪರಿಹಾರ ನಿಧಿಗೆ ಐದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರೂವರೆ ಕೋಟಿ ಹಣ ಈಗಾಗಲೇ ಬಿಡುಗಡೆಯಾಗಿದೆ ಎಂದು ಇದೇ ವೇಳೆ ಪರಿಹಾರ ಕುರಿತು ಮಾಹಿತಿ ನೀಡಿದರು.
ರಜೆ ತೆಗೆದುಕೊಳ್ಳದೆ ಕೆಲಸ ಮಾಡಿ:
ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಬೇಕು. ಕಂದಾಯ, ಪೊಲೀಸ್ ಇಲಾಖೆಯ ಜವಾಬ್ದಾರಿ ತುಂಬಾ ಹೆಚ್ಚಿದೆ. ಕಳೆದ ಬಾರಿ ಆದಂತೆ ಯಾವುದೇ ಅನಾಹುತ ಆಗಬಾರದು. ಕಳೆದ ಬಾರಿ ನಮ್ಮ ಸರ್ಕಾರ ಆಗಷ್ಟೇ ಅಧಿಕಾರಕ್ಕೆ ಬಂದಿತ್ತು. ಹಿಂದಿನ ಸರ್ಕಾರ ಯಾವುದೇ ತಯಾರಿ ಮಾಡಿರಲಿಲ್ಲ.
ಈ ಬಾರಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ. ಕಳೆದ ಒಂದು ತಿಂಗಳಿಂದ ಸನ್ನದ್ಧ ಸ್ಥಿತಿಯಲ್ಲಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲಾಡಳಿತ ಕೇಳಿದಷ್ಟು ಹಣವನ್ನು ನೀಡಿದ್ದೇವೆ. ಬೋಟು, ಕಟ್ಟಿಂಗ್ ಮಿಷನ್, ಲೈಟ್ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಅಗ್ನಿಶಾಮಕ ದಳಕ್ಕೆ ಪ್ರತ್ಯೇಕವಾಗಿ 20 ಕೋಟಿ ರೂ. ಬಿಡುಗಡೆ ಮಾಡಿದೆ. ಪೊಲೀಸು ಅಗ್ನಿಶಾಮಕದಳ, ಕಂದಾಯ ಇಲಾಖೆ ಜಂಟಿಯಾಗಿ ಕೆಲಸ ಮಾಡುತ್ತೇವೆ. ಕಳೆದ ಬಾರಿಯ ರೀತಿಯಲ್ಲಿ ಯಾವುದೇ ಅನಾಹುತ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಮಳೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಭರವಸೆ ನೀಡಿದರು.
ಕಡಲ್ಕೊರೆತ ಪ್ರದೇಶಕ್ಕೆ ಭೇಟಿ:
ಪಡುಬಿದ್ರಿ ಬೀಚ್ನ ಕಡಲ್ಕೊರೆತ ಪ್ರದೇಶಕ್ಕೂ ಸಚಿವರು ಭೇಟಿ ನೀಡಿದರು. ಕಡಲ್ಕೊರೆತಕ್ಕೆ ಪ್ರವಾಸೋದ್ಯಮದ ಕೇಂದ್ರ ಕೊಚ್ಚಿಹೋಗಿದೆ. ಈ ಭಾಗದಲ್ಲಿ ಸಾಕಷ್ಟು ಮನೆಗಳು ಕೂಡ ಇವೆ. ಶಾಶ್ವತ ತಡೆಗೋಡೆ ನಿರ್ಮಿಸಲು ಹೇಳಿದ್ದೇನೆ. ಅಂದಾಜು ಕೊಟ್ಟ ತಕ್ಷಣ ಹಣ ಬಿಡುಗಡೆ ಮಾಡಲಾಗುತ್ತದೆ. ಎನ್ಡಿಆರ್ಎಫ್ನ 300 ಕೋಟಿ ರೂ. ಇದೆ. ಪಡುಬಿದ್ರಿಯ ಪ್ರವಾಸೋದ್ಯಮ ಕೇಂದ್ರವನ್ನು ತೆರವು ಮಾಡಿ ತಡೆಗೋಡೆ ಕಟ್ಟಲಾಗುತ್ತದೆ ಎಂದು ಸಚಿವರು ಅಭಯ ನೀಡಿದರು.
ಸಿಎಂ ಬೇಗ ಗುಣಮುಖರಾಗುತ್ತಾರೆ:
ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪೂರ್ಣ ಅರೋಗ್ಯದಿಂದ ಹಾಗೂ ಲವಲವಿಕೆಯಿಂದಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮುಂದೆ ಬರುತ್ತಾರೆ. ಎರಡ್ಮೂರು ಬಾರಿ ಮಾತನಾಡಿದ್ದಾರೆ. ಸಚಿವರು, ಅಧಿಕಾರಗಳ ಜೊತೆ ಪ್ರತಿದಿನ ಚರ್ಚೆ ನಡೆಸುತ್ತಿದ್ದಾರೆ. ಕೋವಿಡ್ -19, ಪ್ರವಾಹ ಸಮಯದಲ್ಲಿ ಮುಖ್ಯಮಂತ್ರಿಗಳು ಸಮರ್ಪಕ ಕಾರ್ಯನಿರ್ವಹಣೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ಸರ್ಕಾರದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಶೀಘ್ರ ಗುಣಮುಖವಾಗಿ ಬರಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು. ಆದರೆ ಡಿಸ್ಚಾರ್ಜ್ ಎಡವಟ್ಟು ಬಗ್ಗೆ ತುಟಿ ಬಿಚ್ಚದೇ ಸಚಿವರು ಮೌನರಾದರು.