ಉಡುಪಿ: ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೈರ್ಮಲ್ಯದ ಕುರಿತು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಉಡುಪಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು:
ಈ ಹಿಂದೆಯೇ ಸಚಿವರು ಬರದ ಹಿನ್ನೆಲೆ ಜನರ ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಆದ್ರೆ ಬರದ ಕುರಿತು ಸಮರ್ಪಕ ಉತ್ತರ ನೀಡದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಆರ್.ವಿ.ದೇಶಪಾಂಡೆ, ತಕ್ಷಣ ಪಂಚಾಯತ್ಗಳಿಗೆ ತೆರಳಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾದೀತು ಅಂತಾ ಖಡಕ್ ವಾರ್ನಿಂಗ್ ಕೊಟ್ಟರು.
ಬಳಿಕ ಸುದ್ದಿಗಾರರ ಜೊತೆ ಮಾತಾಡಿದ ಸಚಿವರು, ಈ ವರ್ಷ ಮಳೆರಾಯ ಇನ್ನೂ ಆಶೀರ್ವಾದ ಮಾಡಿಲ್ಲ. ಸರ್ಕಾರ ಮುಂದಾಲೋಚನೆ ಮಾಡಿ ಹಲವು ಕ್ರಮ ಕೈಗೊಂಡಿದೆ. ಕರಾವಳಿಯಲ್ಲೂ ಮಳೆ ಬಂದಿಲ್ಲ. ಆರು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಬರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಯಾರೂ ಗುಳೆ ಹೋಗಬಾರದು. ಸರ್ಕಾರ ಸಾಕಷ್ಟು ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ನೆರೆ ಮತ್ತು ಬರ ನಿರ್ವಹಣೆಗೆ ಉಡುಪಿ ಜಿಲ್ಲೆಯೊಂದಕ್ಕೇ ಈಗಾಗಲೇ 24 ಕೋಟಿ ಬಿಡುಗಡೆಯಾಗಿದೆ. ನೀರು ಇಲ್ಲದ ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಮೇವಿನ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡದೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಭೆಯಲ್ಲಿ ಕೆಲವು ಸಲಹೆ ಸೂಚನೆ ಕೊಟ್ಟಿದ್ದೇನೆ. ಅಧಿಕಾರಿಗಳು ಚುರುಕಾಗಬೇಕು. ಜನರ ಬಳಿ ಹೋಗಿ ಸಮಸ್ಯೆ ಬಗೆಹರಿಸಬೇಕು ಎಂದರು.