ಉಡುಪಿ: ಪಿಕ್ ಪಾಕೆಟ್ ಮಾಡುತ್ತಿದ್ದ ಕುತ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಬುಧವಾರ ಉಡುಪಿಯಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಇಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಗುಂಡೂರು ನಿವಾಸಿಗಳಾದ ಕವಿತಾ (33), ಸಬಿತಾ (35) ಮತ್ತು ಲತಾ (25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ದೇವಸ್ಥಾನ, ಮಾಲ್, ಬಸ್ ನಿಲ್ದಾಣ ಮತ್ತು ಬಸ್ಗಳಲ್ಲಿ ಪಿಕ್‌ಪಾಕೆಟ್ ನಡೆಸುತ್ತಿದ್ದರು.
ಆರೋಪಿಗಳ ತಂಡವು ಮೂರರಿಂದ ನಾಲ್ವರು ಮಹಿಳೆಯರು, ಎಳೆಯ ಮಕ್ಕಳೊಂದಿಗೆ ಗುಂಪಾಗಿ ಹೋಗಿ, ವ್ಯಾನಿಟಿ ಬ್ಯಾಗ್ ಮತ್ತು ಪರ್ಸ್ ಇರುವ ಹೆಂಗಸರ ಬಳಿ ನಿಂತು ಅನಾವಶ್ಯಕ ಒತ್ತಡ ಹಾಕಿ, ಅವರ ಮೈಗೆ ತಾಗಿ ನಿಂತು ಬ್ಯಾಗ್ ಒಳಗೆ ಇರುವ ಪರ್ಸ್‌ಗಳನ್ನು ಚಾಲಾಕಿತನದಿಂದ ತೆಗೆದು ಅದರಲ್ಲಿರುವ ಬೆಲೆಬಾಳುವ ಸ್ವತ್ತುಗಳನ್ನು ಕ್ಷಣ ಮಾತ್ರದಲ್ಲಿ ಕಳವು ಮಾಡುತ್ತಾರೆ.
ಉಡುಪಿಯಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಬೆಂಗಳೂರು ನಿವಾಸಿ ಅರ್ಚನಾ ರಾವ್ ಅವರು, ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಕಡಿಯಾಳಿಗೆ ಹೋಗುವಾಗ ಬಸ್ನಲ್ಲಿ ಅಪರಿಚಿತ ಮಹಿಳೆಯರು ಅರ್ಚನಾ ಅವರ ಬ್ಯಾಗ್‌ನಲ್ಲಿದ್ದ ಪರ್ಸ್ ಕಳವು ಮಾಡಿದ್ದರು. ನಾಲ್ಕು ಎಟಿಎಂ ಕಾರ್ಡ್, ವೋಟರ್ ಐಡಿ, 5ಸಾವಿರ ರೂ. ನಗದು ಕಳವು ಮಾಡಿದ್ದರು. ಬಳಿಕ ಎಟಿಎಂ ಕಾರ್ಡ್ ಬಳಸಿ 25 ಸಾವಿರ ರೂ. ನಗದೀಕರಿಸಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ, ಉಡುಪಿ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಸಕ್ತಿ ವೇಲು ಇ. ಮತ್ತು ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಮೂವರು ಮಹಿಳಾ ಆರೋಪಿಗಳನ್ನು ಬುಧವಾರ ಬಂಧಿಸಿದೆ.