ಉಡುಪಿ: ಪೇಜಾವರ ಸ್ವಾಮೀಜಿಯವರಿಗೆ ಆರು ಜನ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಐದನೇ ದಿನವೂ ವೆಂಟಿಲೇಟರ್ ಮೂಲಕವೇ ಚಿಕಿತ್ಸೆ ನೀಡಲಾಯಿತು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹಾಗೂ ವೈದ್ಯರ ತಂಡ, ಬೆಂಗಳೂರು ವೈದ್ಯರ ತಂಡ ನಮ್ಮ ಜೊತೆಗಿದ್ದು, ಏಮ್ಸ್‌ನೊಂದಿಗೂ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದರು.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಚಿಕಿತ್ಸೆ ಸಂಬಂಧ ನಿರಂತರ ಸಂಪರ್ಕದಲ್ಲಿದ್ದಾರೆ. ಸ್ವಾಮೀಜಿಗೆ ನಡೆಸಬೇಕಾದ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ದೈನಂದಿನ ಸಣ್ಣ ಪರೀಕ್ಷೆಗಳೂ ನಡೆಯುತ್ತಿವೆ. ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಅಂತ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದರು.
ಸ್ವಾಮೀಜಿ ಸಂಪೂರ್ಣ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು. ಅವರು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಅವರ ದೇಹಸ್ಥಿತಿ ಈಗ ಸಾಕಷ್ಟು ಸುಧಾರಿಸಿದೆ. ಶ್ವಾಸಕೋಶದ ಸೋಂಕು ಇದೆ, ಮೊದಲನೇ ದಿನಕ್ಕೆ ಹೋಲಿಸಿದಾಗ ಪರ್ವಾಗಿಲ್ಲ, ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು. ಆತಂಕ ಪಡುವ ವಿಚಾರ ಇಲ್ಲ ಎಂದರು.
ಸ್ವಾಮೀಜಿ ಉಸಿರಾಡಲು ಪ್ರಯತ್ನಿಸುತ್ತಿದ್ದಾರೆ. ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿದೆ. ಚಿಕಿತ್ಸೆಗೆ ಇನ್ನೂ ಬಹಳ ಸಮಯ ಬೇಕಾಗುತ್ತೆ. ವೆಂಟಿಲೇಟರ್ನಲ್ಲಿ ಇನ್ನೂ ಸಾಕಷ್ಟು ಸಮಯ ಇರಿಸಬೇಕಾಗಬಹುದು. ಆದರೆ ಅವರನ್ನು ಬೇರೆಡೆಗೆ ಚಿಕಿತ್ಸೆಗೆ ಕರೆದೊಯ್ಯುವ ಅಗತ್ಯ ಇಲ್ಲ. ತಿಂಗಳವೆರೆಗೆ ಚಿಕಿತ್ಸೆ ನೀಡಬೇಕಾದರೂ ಆಶ್ಚರ್ಯವಿಲ್ಲ. ಗಣ್ಯ ವ್ಯಕ್ತಿಗಳು ಬರುವುದರಿಂದ ಚಿಕಿತ್ಸೆಗೆ ಸಮಸ್ಯೆ ಆಗುತ್ತದೆ. ನಾವು ಪ್ರತಿನಿತ್ಯ ಆರೋಗ್ಯದ ಮಾಹಿತಿ ಮಾಧ್ಯಮಗಳಿಗೆ ನೀಡುತ್ತೇವೆ ಎಂದು ಮನವಿ ಮಾಡಿದ್ರು.