ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣವಾಗಿದೆ. ಚೇತರಿಕೆಯ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಹೀಗಾಗಿ ಶ್ರೀಗಳನ್ನು ಇಂದೇ ಮಠಕ್ಕೆ ಸ್ಥಳಾಂತರ ಮಾಡುತ್ತೇವೆ ಎಂದು ಪೇಜಾವರ ಕಿರಿಯ ಶ್ರೀಗಳು ಹೇಳಿದ್ದಾರೆ.
ಪೇಜಾವರ ಶ್ರೀಗಳ ಅಂತಿಮ ಆಸೆಯೂ ಅದೇ ಆಗಿತ್ತು. ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆಯನ್ನು ಮಠದಲ್ಲೇ ಮಾಡಲಾಗುತ್ತದೆ. ಆಸ್ಪತ್ರೆಯವರು ಕೆಲ ಕಾರ್ಯ ವಿಧಾನಗಳು ಬಾಕಿಯಿದೆ. ತಯಾರಿ ನೋಡಿಕೊಂಡು ಮುಂದಿನ ಕ್ರಮ ಮಾಡುತ್ತೇವೆ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ.
ಪೇಜಾವರ ಮಠಕ್ಕೆ ಭಕ್ತರ ಭೇಟಿ ಸದ್ಯ ಬೇಡ...
ಸದ್ಯ ಪೇಜಾವರ ಮಠಕ್ಕೆ ಭಕ್ತರ ಭೇಟಿ ಬೇಡ ಎಂದು ಪೇಜಾವರ ಕಿರಿಯ ಶ್ರೀಗಳು ವಿನಂತಿಸಿದ್ದಾರೆ. ಎಲ್ಲರೂ ಇದ್ದಲ್ಲಿಂದ ಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೂರ್ಣ ಸಹಕಾರ ಸಿಗುವ ವಿಶ್ವಾಸ ಇದೆ ಎಂದು ಶ್ರೀಗಳು ಹೇಳಿದ್ದಾರೆ.
ಪೇಜಾವರ ಶ್ರೀ ಎಲ್ಲಿಯೂ ಮಾಯ ಆಗಲ್ಲ.: ಡಾ. ಡಿ. ವೀರೇಂದ್ರ ಹೆಗ್ಗಡೆ
ಪೇಜಾವರ ಶ್ರೀ ಆರೋಗ್ಯ ಕ್ಷೀಣವಾಗುತ್ತಿದೆ. ಕೃತಕ ಉಸಿರಾಟದಲ್ಲೇ ಶ್ರೀಗಳಿದ್ದಾರೆ. ಇತರೆ ಅಂಗಾಂಗಕ್ಕೂ ಯಂತ್ರ ಅಳವಡಿಸಲಾಗಿದೆ. ಇಂದು ನಾಳೆಯ ಬೆಳವಣಿಗೆಯನ್ನು ವೈದ್ಯರು ಗಮನಿಸುತ್ತಿದ್ದಾರೆ. ಚಿಕಿತ್ಸೆ ಪರಿವರ್ತನೆ, ಬದಲಾವಣೆ ಇಂದು ನಿರ್ಧಾರ ಆಗುತ್ತದೆ. ಪೇಜಾವರ ಶ್ರೀ ನಮ್ಮನ್ನು ಬಿಟ್ಟು ಹೋಗಲ್ಲ. ಸ್ವಾಮೀಜಿ ನಮ್ಮ ಜೊತೆಗೇ ಇರುತ್ತಾರೆ. ಪೇಜಾವರ ಶ್ರೀ ಎಂದೂ ಮಾಯ ಆಗಲ್ಲ. ನಮ್ಮ ಜೊತೆಗಿದ್ದವರು ಜೊತೆಗೇ ಇರುತ್ತಾರೆ. ನಮ್ಮದು ಐವತ್ತು ವರ್ಷಗಳ ನಿರಂತರ ಒಡನಾಟವಿದೆ. ಕನ್ನಡ ನಾಡು, ಇಡೀ ದೇಶ ಪ್ರಾರ್ಥನೆ ಮಾಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.