ಉಡುಪಿ : ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಇಹಲೋಕ ತ್ಯಜಿಸಿ ಒಂದು ವರ್ಷವಾಗಿದೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅವರ ಪ್ರಥಮ ಆರಾಧನೆಯೂ ನಡೆದಿದೆ. ಗುರುಗಳ ಆರಾಧನೆ ನಡೆಸಿದ ಬಳಿಕ ವಿಶ್ವ ಪ್ರಸನ್ನ ತೀರ್ಥರು ಮತ್ತೊಂದು ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ.
ಅರವತ್ತರ ದಶಕದಲ್ಲಿ ದಲಿತರ ಕೇರಿಗಳಿಗೆ ಭೇಟಿ ಕೊಟ್ಟು ವಿಶ್ವೇಶತೀರ್ಥರು ಸಮಾಜದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಅವರ ಭೇಟಿ ಅಸ್ಪೃಶ್ಯತೆ ಹೋಗಲಾಡಿಸುವ ಉದ್ದೇಶ ಹೊಂದಿತ್ತು. ಇದೀಗ ವಿಶ್ವಪ್ರಸನ್ನ ತೀರ್ಥರು ಕೂಡ ದಲಿತ ಕೇರಿಗಳಲ್ಲಿ ಸಂಚರಿಸಿ ಸಂಚಲನ ಮೂಡಿಸಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಎಲ್ಲಾ ಹಿಂದೂಗಳು ಕೈಜೋಡಿಸಬೇಕು ಎಂಬ ಉದ್ದೇಶದಿಂದ ದಲಿತ ಕುಟುಂಬಗಳಿಗೆ ರಾಮ ಮಂತ್ರ ಜಪದ ಬೋಧನೆ ಮಾಡಿದ್ದಾರೆ.
ಉಡುಪಿಯ ಕೊಡವೂರು ಸಮೀಪದ ತಾಳಿಕಟ್ಟೆ ಕಾಲೋನಿಯಲ್ಲಿ ಪೇಜಾವರ ಶ್ರೀಗಳ ವಿಶೇಷ ಧಾರ್ಮಿಕ ಭೇಟಿ ನಡೆಯಿತು. ಇಲ್ಲಿನ ದಲಿತ ಮನೆಗಳಿಗೆ ಭೇಟಿ ಕೊಟ್ಟು ಹಿಂದೂಗಳೆಲ್ಲಾ ಸೇರಿ ರಾಮ ಮಂದಿರ ಕಟ್ಟೋಣ ಎಂದು ಸ್ವಾಮೀಜಿ ಕರೆ ನೀಡಿದರು.
ಓದಿ:ಮಡೆಸ್ನಾನದ ಬದಲು ಎಡೆಸ್ನಾನ: ಮುಚ್ಲಗೋಡು ದೇವಸ್ಥಾನದಲ್ಲಿ ಹರಕೆ ತೀರಿಸಿದ ಭಕ್ತರು
ಪೇಜಾವರ ಶ್ರೀಗಳ ಭೇಟಿಯ ಹಿನ್ನೆಲೆ ಇಲ್ಲಿನ ಕಾಲೋನಿಗಳನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಸ್ವಾಮೀಜಿ ದಲಿತ ಮನೆಗಳಿಗೆ ಭೇಟಿ ನೀಡಿದರು. ರಾಮಮಂದಿರ ನಿರ್ಮಾಣದ ಮಹತ್ವದ ಕುರಿತು ಮಾತನಾಡಿದರು. ಬಡವ-ಶ್ರೀಮಂತ ಬೇಧವಿಲ್ಲದೆ ಮಂದಿರ ನಿರ್ಮಾಣದಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂದು ವಿವರಿಸಿದರು.
ಈ ಕಾಲೋನಿಯಲ್ಲಿ ಸುಮಾರು 120 ದಲಿತರ ಮನೆಗಳಿದ್ದು, ಸಂಘಪರಿವಾರದ ಕಾರ್ಯಕರ್ತರು ಈ ಎಲ್ಲಾ ಮನೆಗಳಿಗೂ ದೀಪವನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಮ ದೇವರನ್ನು ಸ್ಮರಿಸುತ್ತಾ ಪ್ರತಿದಿನ ದೀಪ ಬೆಳಗಿ ರಾಮ ಮಂತ್ರ ಜಪಿಸುವಂತೆ ಸ್ವಾಮೀಜಿ ಸಲಹೆ ನೀಡಿದ್ದಾರೆ.