ಉಡುಪಿ: ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವವರೆಗು ಬಿಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಆರೋಪಿಗಳಿಗೆ ಜಾಮೀನು ಕೊಡಬಾರದೆಂಬ ವಿಚಾರ ಇದೆ. ಸುಗ್ರೀವಾಜ್ಞೆಯನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ. ಹಲ್ಲೆ ಮಾಡಿದರೆ ಮತ್ತು ಲಾಕ್ಡೌನ್ ನಿರ್ಬಂಧಕ್ಕೆ ಅಡಚಣೆಯಾದರೆ ಸಹಿಸಲ್ಲ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಯಾರೇ ಎಷ್ಟೇ ದೊಡ್ಡವರಾದ್ರೂ ಕಠಿಣ ಕ್ರಮ ತೆಗದುಕೊಳ್ಳುತ್ತೇವೆ. ಪ್ರಕರಣದಲ್ಲಿ ರಾಜಿಗೆ ಅವಕಾಶ ಇಲ್ಲವೆ ಇಲ್ಲಾ ಎಂದು ಹೇಳಿದರು.
ಉಡುಪಿಯಲ್ಲಿ ಕೋವಿಡ್-19 ಮ್ಯಾನೇಜ್ಮೆಂಟ್ ಚೆನ್ನಾಗಿದೆ. ಎಲ್ಲಾ ವೈದ್ಯರಿಗೆ ಅಧಿಕಾರಿಗಳಿಗೆ ಧನ್ಯವಾದ. ಜಿಲ್ಲಾಸ್ಪತ್ರೆಯಲ್ಲಿ ಸೆಂಟ್ರಲೈಸ್ಡ್ ಆಕ್ಸಿಜನ್ 50 ಬೆಡ್ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಲ್ಲಿ 10 ಬೆಡ್ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ 3500 ಪಿಪಿಇ ಕಿಟ್ ಅಗತ್ಯ ಇದೆ. ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ರಾಜ್ಯದಲ್ಲಿ 27 ಲ್ಯಾಬ್ ಆರಂಭವಾಗಲಿವೆ. ಹೊರ ಜಿಲ್ಲೆಯಿಂದ ಜನರನ್ನು ಸದ್ಯಕ್ಕೆ ಉಡುಪಿಯೊಳಗೆ ಬಿಡುವುದಿಲ್ಲ. ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಸುವ ಬಗ್ಗೆ ಬೇಡಿಕೆ ಇದೆ. ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬಂದ ಮೇಲೆ ಚಿಂತನೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.