ಉಡುಪಿ : ದೀಪ ಬೆಳಗುವಾಗ ಲೈಟ್ ಆಫ್ ಮಾಡಬೇಕಾಗಿಲ್ಲ. ಉದ್ದೀಪನೆ ಶಕ್ತಿಗಾಗಿ ದೀಪ ಬೆಳಗಿ. ದೀಪ ಬೆಳಗುವುದಕ್ಕೆ ಜಾತಿ ಧರ್ಮದ ಅಡ್ಡಿ ಇಲ್ಲ. ದೀಪ ಬೆಳಗಿ ನಿಮ್ಮ ನಿಮ್ಮ ದೇವರ ಆರಾಧನೆ ಮಾಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮೋದಿ ದೀಪ ಬೆಳಗುವ ಕರೆಗೆ ಕುಮಾರಸ್ವಾಮಿ ಮಾಡಿರುವ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಸಂಸ್ಥಾಪನಾ ದಿನವನ್ನು ತಲೆಯಲ್ಲಿಟ್ಟು ಮೋದಿ ಕರೆ ಕೊಟ್ಟಿಲ್ಲ. ಇದು ಕಾಕತಾಳೀಯವಾಗಿ ಬಂದಿರಬಹುದು. ಪ್ರಧಾನಿ ಮೋದಿ ಕೇವಲ ಭಾರತಕ್ಕೆ ಕೆಲಸ ಮಾಡುತ್ತಿಲ್ಲ. ವಿಶ್ವದ ಹಿಂದುಳಿದ ರಾಷ್ಟ್ರಗಳಿಗೆ ಭಾರತ ಸಹಾಯಹಸ್ತ ಚಾಚಿದೆ ಎಂದರು.
ಕೇಂದ್ರದಿಂದ ಕೊರೊನಾ ನಿಧಿ ಬಿಡುಗಡೆಯಾಗಿದ್ದು, ಕರ್ನಾಟಕಕ್ಕೆ ಬಂದ ಅನುದಾನದ ಮಾಹಿತಿಯಿಲ್ಲ. ರಾಜ್ಯದ ಜನ ಹಸಿವಿನಿಂದ ಬಳಲದಂತೆ ಸರಕಾರ ನೋಡಿಕೊಳ್ಳುತ್ತದೆ. ಎಲ್ಲಾ ಜನಪ್ರತಿನಿಧಿಗಳು ಜನರ ಸೇವೆಯಲ್ಲಿ ತೊಡಗಿದ್ದಾರೆ. ಸರಕಾರದಿಂದ ಅನುದಾನಗಳು ಬಿಡುಗಡೆ ಆಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಈ ಎಲ್ಲಾ ಹೊಣೆಯನ್ನು ವಹಿಸಲಾಗಿದೆ. ಪಿಎಂ ಕೇರ್ಸ್‌ಗೆ ಒಂದು ಕೋಟಿ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ಪರಿಹಾರ ಕೇಳಿದರೆ ಕೊಡುತ್ತೇವೆ. ಅಭಿವೃದ್ಧಿಗಿಂತ ಜನರ ಜೀವ ರಕ್ಷಣೆ ಮುಖ್ಯವಾಗಿದೆ ಎಂದು ತಿಳಿಸಿದರು.