ಉಡುಪಿ : ಹಿಜಾಬ್ ವಿವಾದದ ಹಿಂದೆ ವಿದ್ಯಾರ್ಥಿನಿಯರ ತಪ್ಪಿಲ್ಲ. ಇದರ ಹಿಂದೆ ವಿದೇಶಿ ಕೈವಾಡವಿದೆ. ಜಿಲ್ಲೆಯಲ್ಲಿ ಆರಂಭವಾದ ಗಲಾಟೆ ಇಡೀ ಪ್ರಚಂಚಕ್ಕೆ ಹರಡಿದ್ದು, ಇದರ ಹಿಂದೆ ಅನೇಕ ಜನರಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದರು.
ಕಾರ್ಕಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರಂಭವಾದ ಘಟನೆ ದೇಶಾದ್ಯಂತ ಎಷ್ಟು ವೇಗವಾಗಿ ಹರಡಿದೆ. ಇದನ್ನು ವಿದ್ಯಾರ್ಥಿಗಳು ಮಾಡಲು ಸಾಧ್ಯವಿಲ್ಲ. ಇದರ ಹಿಂದೆ ಐಸಿಸ್, ಕೆಎಫ್ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಎಂದು ಆರೋಪಿಸಿದರು.
ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಶಾಲೆಗೆ ಹೋಗಬೇಕೇ ಹೊರತು ಧರ್ಮ ಪ್ರಚಾರಕ್ಕಾಗಿ ಶಾಲೆಗೆ ಹೋಗಬಾರದು ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ನೀವು ನಿಮ್ಮ ಮನೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ, ಶಾಲೆ-ಕಾಲೇಜುಗಳಿಗೆ ಕೇವಲ ವಿದ್ಯೆ ಕಲಿಯಲು ಮಾತ್ರ ಹೋಗಬೇಕು ಎಂದರು.
ಹಿಜಾಬ್ ಹೋರಾಟ ಮಾಡಿ ಎಂದು ಐಸಿಸ್ ಹೇಳಿಕೊಟ್ಟಿದೆ. ಮಕ್ಕಳು ಇರುವುದರಿಂದ ನಾವು ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ನಾವು ಹಂತ-ಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.
ಹಿಜಾಬ್ ಹೋರಾಟದ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಹೋರಾಟದ ಹಿಂದಿರುವ ಭಯೋತ್ಪಾದಕರನ್ನು ಹೊರಗೆ ಎಳೆಯಬೇಕಾಗಿದೆ ಎಂದರು.
ಇದನ್ನೂ ಓದಿ: ಈಶ್ವರಪ್ಪನವರ ತಪ್ಪೇನು, ರಾಜೀನಾಮೆ ಏಕೆ ಕೊಡಬೇಕು : ಸಚಿವ ನಾರಾಯಣ ಗೌಡ ಪ್ರಶ್ನೆ