ಉಡುಪಿ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪಿ ಹೊನ್ನಪ್ಪ (34) ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ. ಐರೋಡಿ ಗ್ರಾಮದ ಹಲ್ಸೆಬೆಟ್ಟು ಎಂಬಲ್ಲಿ ವಾಸವಾಗಿದ್ದ ಈತ ಸಂತೆಕಟ್ಟೆಯಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮಹಿಳೆಯೊಬ್ಬಳು ಬ್ರಹ್ಮಾವರದಿಂದ ಉಡುಪಿಯ ಸಂತೆಕಟ್ಟೆಯಲ್ಲಿರುವ ಮನೆಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಬೈಕ್ನಲ್ಲಿ ಡ್ರಾಪ್ ನೀಡುವುದಾಗಿ ನಂಬಿಸಿ ಆರೋಪಿಯು ಬೈಕ್ ಹತ್ತಿಸಿಕೊಂಡಿದ್ದಾನೆ. ಆನಂತರ ಹೊನ್ನಪ್ಪ ಆಕೆಯನ್ನು ಹಾಡಿಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಲು ಮುಂದಾಗಿದ್ದ. ಇದಕ್ಕೆ ಸಹಕರಿಸದ ಮಹಿಳೆಯನ್ನು ಕೊಲ್ಲುವುದಾಗಿ ಬೆದರಿಸಿದ್ದ. ಅಲ್ಲದೆ, ಆಕೆ ಮೇಲೆ ಎತ್ತಿಹಾಕಲು ಕಲ್ಲು ಹುಡುಕುತ್ತಿದ್ದ ವೇಳೆ ಮಹಿಳೆ ಸ್ಥಳದಿಂದ ಓಡಿಬಂದಿದ್ದಾಳೆ.
ಈ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದರಲ್ಲಿದ್ದ ಕಂಡ ಬೈಕ್ ನಂ. ಕೆಎ18 ಕ್ಯೂ3094 ಬಜಾಜ್ ಪ್ಲಾಟಿನ ಆಧಾರದ ಮೇಲೆ ಬೈಕ್ ಅನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.