ಕಾರ್ಕಳ(ಉಡುಪಿ): ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಮೃತಪಟ್ಟಿರುವ ಲೆಫ್ಟಿನೆಂಟ್ ಕರ್ನಲ್ ಹರ್ಜೀಂದರ್ ಸಿಂಗ್ ಕಾರ್ಕಳ ಮೂಲದ ಪ್ರಪುಲ್ಲಾ ಎಂಬುವವರನ್ನು ವಿವಾಹವಾಗಿದ್ದರು. ಇದೀಗ ಅಳಿಯನನ್ನು ಕಳೆದು ಕೊಂಡಿರುವ ಕಾರ್ಕಳದ ಈ ಕುಟುಂಬದ ಶೋಕ ಸಾಗರದಲ್ಲಿದೆ.
ಕಾರ್ಕಳದ ಸಾಲ್ಮಾರು ಗ್ರಾಮದ ಮಿನೇಜಸ್ ಅವರ ಪುತ್ರಿ ಪ್ರಪುಲ್ಲಾ ಹಾಗೂ ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹರ್ಜೀಂದರ್ ಸಿಂಗ್ ನಡುವೆ ಪ್ರೇಮಾಂಕುರವಾಗಿ, 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಇವರಿಗೆ ಒಬ್ಬಳು ಮಗಳು ಇದ್ದಳು. ಪ್ರಸ್ತುತ ಹರ್ಜಿಂದರ್ ಸಿಂಗ್ ಅವರು ಸಿಡಿಎಸ್ ಬಿಪಿನ್ ರಾವತ್ ಅವರ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸುಮಾರು ನಾಲ್ಕು ವರ್ಷದ ಹಿಂದೆ ಹರ್ಜಿಂದರ್ ಸಿಂಗ್ ಕಾರ್ಕಳದ ಮನೆಗೆ ಬಂದಾಗ ಎಲ್ಲರೊಂದಿಗೂ ನಗು ನಗುತ್ತಾ ಚೆನ್ನಾಗಿಯೇ ಮಾತನಾಡಿಸಿದ್ದರು ಎಂದು ಪ್ರಪುಲ್ಲಾ ಅಕ್ಕ ಪುಷ್ಪಾ ಸ್ಮರಿಸಿದರು. ಹರ್ಜಿಂದರ್ ಸಿಂಗ್ ಅವರ ಅಂತಿಮ ದರ್ಶನಕ್ಕಾಗಿ ಪ್ರಪುಲ್ಲಾ ಅವರ ಅಣ್ಣ ಕಾರ್ಕಳದಿಂದ ತೆರಳಿದ್ದು, ಮನೆಯವರಿಗೆ ಸ್ವತಃ ಪ್ರಪುಲ್ಲಾ ಅವರೇ ಕರೆ ಮಾಡಿ ಧೈರ್ಯ ತುಂಬುತ್ತಿದ್ದಾರೆಂದು ಪ್ರಪುಲ್ಲಾ ಅವರ ಅಕ್ಕನ ಗಂಡ ವೆಲೇರಿಯನ್ ತಿಳಿಸಿದ್ದಾರೆ. ಸಾಲ್ಮಾರು ಗ್ರಾಮದವರು ಕೂಡ ಊರ ಅಳಿಯ, ವೀರ ಯೋಧನನ್ನು ಕಳೆದುಕೊಂಡ ದುಃಖದಲ್ಲಿದೆ.
ಇದನ್ನೂ ಓದಿ: Chopper Crash: ಯೋಧರ ಪಾರ್ಥಿವ ಶರೀರ ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅಪಘಾತ