ಉಡುಪಿ: ಅಪರೂಪದ ಸಂಪ್ರದಾಯಗಳಿಗೆ ಹೆಸರಾದ ಉಡುಪಿಯ ಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ನಡೆಸಲಾಯಿತು.
ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟ ಮಠಗಳ ರಥಬೀದಿ ಅಲಂಕಾರಗೊಂಡು ಹಣತೆಯ ದೀಪಗಳಿಂದ ಕಂಗೊಳಿಸಿತು. ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ಮೆರವಣಿಗೆ ನಡೆಸಲಾಯಿತು. ದೇವರ ಸ್ವಾಗತಕ್ಕೆ ಉಡುಪಿಯ ಅಷ್ಟ ಮಠಗಳ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿದ್ದು, ಭಕ್ತರು ಕೃಷ್ಣನಿಗೆ ದೀಪ ಬೆಳಗಿ ಸಂಭ್ರಮಿಸಿದರು. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನು ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು. ಈ ಮಹೋತ್ಸವವನ್ನು ಲಕ್ಷದೀಪೋತ್ಸವ ಎನ್ನುತ್ತಾರೆ.
ಇಳಿ ಹೊತ್ತಿನಲ್ಲಿ ಭಕ್ತರೆಲ್ಲರೂ ರಥಬೀದಿಯಲ್ಲಿ ಸೇರಿ ಸಾವಿರಾರು ದೀಪ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಿತು. ಆ ಬಳಿಕ ಮಠದಿಂದ ಹೊರ ಬರುವ ಕೃಷ್ಣನ ಉತ್ಸವ ಮೂರ್ತಿಯನ್ನು ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು. ಸಾಲು ಸಾಲು ದೀಪಗಳ ನಡುವೆ ಕೃಷ್ಣನ ಮೂರ್ತಿಯ ಮೆರವಣಿಗೆ ನಡೆಯಿತು.
ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀಗಳ ಸಹಿತ ಉಳಿದ ಮಠಗಳ ಯತಿಗಳು ಭಾಗವಹಿಸಿದ್ದರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು. ಕೋವಿಡ್ ಕಾರಣದಿಂದ ಅಷ್ಟಮಿಯಂದು ಕೃಷ್ಣ ಮಠಕ್ಕೆ ಬರಲು ಸಾಧ್ಯವಾಗದ ಭಕ್ತರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡು ಸಂತೋಷಗೊಂಡರು.
ಮುಂದಿನ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷ ದೀಪೋತ್ಸವ ನಡೆಯುತ್ತದೆ. ಲಕ್ಷ ದೀಪೋತ್ಸವದೊಂದಿಗೆ ಆರಂಭವಾಗುವ ಕೃಷ್ಣನ ರಥೋತ್ಸವ ಮುಂದಿನ ಮಳೆಗಾಲದವರೆಗೆ ನಡೆಯುತ್ತದೆ. ಅಷ್ಟ ಮಠಗಳ ರಥಬೀದಿಯಲ್ಲಿ ಸೇವಾ ರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರುತ್ತದೆ.