ಕುಂದಾಪುರ: ಮಿನಿ ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ರಾಘವೇಂದ್ರ ಗಾಣಿಗನಿಗೆ ಮಾ. 13ರವರೆಗೆ ಚಿಕಿತ್ಸೆ ನೀಡುವಂತೆ ಕುಂದಾಪುರ ನ್ಯಾಯಾಲಯ ಆದೇಶಿಸಿದೆ.
ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದ ಹಿನ್ನೆಲೆ ಕುಂದಾಪುರ ಪೊಲೀಸರು ಆರೋಪಿಯನ್ನು ಬುಧವಾರ ಬೆಳಿಗ್ಗೆ ಹಾಜರುಪಡಿಸಿದ್ರು. ಆರೋಪಿ ಪರ ವಕೀಲ ಜಿ.ಸಂತೋಷ್‌ಕುಮಾರ್ ಶೆಟ್ಟಿ ವಾದ ಮಂಡಿಸಿದ್ದು, ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ಯಾವುದೇ ದುರುದ್ದೇಶವಿಲ್ಲದೇ ಆ ರೀತಿ ವರ್ತಿಸಿದ್ದು, ಪೊಲೀಸರ ಎದುರು ಕೂಡಾ ಅದೇ ರೀತಿ ಕೂಗುತ್ತಿದ್ದ. ಈ ನಿಟ್ಟಿನಲ್ಲಿ ಆತನಿಗೆ ಚಿಕಿತ್ಸೆಯ ಅಗತ್ಯವಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಾಲಯ, ಆರೋಪಿ ರಾಘವೇಂದ್ರನಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಾರ್ಚ್ 13ರವರೆಗೆ ಚಿಕಿತ್ಸೆ ನೀಡಿ ವರದಿ ಸಲ್ಲಿಸುವಂತೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ.
ಈ ಸಂದರ್ಭ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆಯೂ ಸೂಚಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಾರ್ಚ್ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.